ಸ್ವದೇಶಿ ಕೊವ್ಯಾಕ್ಸಿನ್‌ ಶೇ.81ರಷ್ಟು ಪರಿಣಾಮಕಾರಿ

ಹೈದರಾಬಾದ್: ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್ ಶೇ.81ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.

ಇಂದು 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಬಳಿಕ ಈ ವರದಿಯ ಬಗ್ಗೆ ಮಾಹಿತಿ ನೀಡಿದೆ. ಒಟ್ಟು 25,800 ಸ್ವಯಂ ಸೇವಕರ ಮೇಲೆ ಪ್ರಯೋಗ ಮಾಡಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಜೊತೆ ನಡೆಸಿದ ಅತ್ಯಂತ ದೊಡ್ಡ ಪ್ರಯೋಗ ಎಂದು ಹೇಳಿದೆ.

ಈ ಬಗ್ಗೆ ಭಾರತ್ ಬಯೋಟೆಕ್‍ನ ಅಧ್ಯಕ್ಷ ಹಾಗೂ ಎಂಡಿ ಡಾ.ಕೃಷ್ಣ ಎಲ್ಲಾ ಅವರು ಮಾಹಿತಿ ನೀಡಿದ್ದು, ಇಂದು ವೈಜ್ಞಾನಿಕ ಕ್ಷೇತ್ರದಲ್ಲಿ ಹಾಗೂ ಕೊರೊನಾ ವ್ಯಾಕ್ಸಿನ್ ಸಂಶೋಧನಾ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಿದೆ. ಇಂದು ನಮ್ಮ 3ನೇ ಹಂತದ ಟ್ರಯಲ್ಸ್ ನ ವರದಿ ಬಂದಿದೆ. ಒಟ್ಟು 27 ಸಾವಿರ ಸ್ವಯಂಸೇವಕರಿಂದ ಕೊರೊನಾ ವ್ಯಾಕ್ಸಿನ್‍ನ 1, 2 ಹಾಗೂ 3ನೇ ಹಂತದ ಟ್ರಯಲ್ಸ್ ನ ವರದಿ ಬಂದಿದೆ ಎಂದಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಉತ್ತಮ ಪರಿಣಾಮಕಾರಿ ಲಸಿಕೆಯಾಗಿದೆ. ಇದು ವೇಗವಾಗಿ ಹರಡುತ್ತಿರುವ ಇಂಗ್ಲೆಂಡಿನ ರೂಪಾಂತರ ವೈರಸ್ ವಿರುದ್ಧ ಸಹ ಹೋರಾಡುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

3ನೇ ಹಂತದ ಅಧ್ಯಯನದಲ್ಲಿ 18ರಿಂದ 98 ವರ್ಷದೊಳಗಿನ 25,800 ಸ್ವಯಂ ಸೇವಕರು ಭಾಗಿಯಾಗಿದ್ದರು. ಇದರಲ್ಲಿ 2,433 ಜನ 60 ವರ್ಷ ಮೇಲ್ಪಟ್ಟವರಿದ್ದಾರೆ. 4,500 ಜನ ವಿವಿಧ ಕಾಯಿಲೆ ಉಳ್ಳವರು ಸಹ ಇದ್ದಾರೆ. 3ನೇ ಹಂತದ ಕ್ಲಿನಿಕಲ್ ಟ್ರಯಲ್‍ನಲ್ಲಿ ಪಿಸಿಆರ್ ಖಚಿತಪಡಿಸಿದ ರೋಗ ಲಕ್ಷಣ ಹೊಂದಿದವರಿಗೆ ಪರೀಕ್ಷೆ ನಡೆಸಲಾಗಿದೆ.

Comments

Leave a Reply

Your email address will not be published. Required fields are marked *