– ಸೇನಾ ಅವಧಿ ಮುಗಿದಿದ್ದರೂ ಸೇವೆಯ ಹಂಬಲ
– ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಹಾಸನ: ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಸಾಮಗ್ರಿ ಸಾಗಿಸುವಾಗ ಗುಡ್ಡ ಕುಸಿದು ಸಾವನ್ನಪ್ಪಿದ ಭಾರತೀಯ ಯೋಧ ಮಲ್ಲೇಶ್ ಅವರ ಪಾರ್ಥಿವ ಶರೀರ ಹಾಸನದ ಸ್ವಗ್ರಾಮಕ್ಕೆ ಆಗಮಿಸಿದೆ. ಇದೀಗ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಯೋಧ ಮಲ್ಲೇಶ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದವರು. ಇವರು ಅರುಣಾಚಲ ಪ್ರದೇಶದ ಬೆಟಾಲಿಯನ್ 18 ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಿಲಿಟರಿ ಸಾಮಗ್ರಿಗಳನ್ನು ಗಡಿ ಭಾಗಕ್ಕೆ ಸಾಗಿಸುವಾಗ ಗುಡ್ಡ ಕುಸಿದು ಮಲ್ಲೇಶ್ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.

ಮಲ್ಲೇಗೌಡ ಹಾಗೂ ಪುಟ್ಟಮ್ಮ ಎಂಬವರ ಪುತ್ರರಾಗಿರುವ ಯೋಧ ಮಲ್ಲೇಶ್‍ಗೆ ಪತ್ನಿ ಪೂರ್ಣಿಮಾ ಹಾಗೂ ಋತ್ವಿಕ್, ಸಹನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮಲ್ಲೇಶ್ ಸೇನೇ ಸೇವಾ ಅವಧಿ ಮುಗಿದಿದ್ದರೂ ದೇಶ ಸೇವೆ ಹಂಬಲದಲ್ಲಿ ಕೆಲಸ ಮುಂದುವರಿಸಿದ್ದರು.

ಇಂದು ಸ್ವಗ್ರಾಮಕ್ಕೆ ಯೋಧ ಮಲ್ಲೇಶ್ ಪಾರ್ಥಿವ ಶರೀರ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Leave a Reply