ಸ್ಯಾಂಡಲ್‍ವುಡ್ ಕಲಾ ನಿರ್ದೇಶಕ ಲೋಕೇಶ್ ಆತ್ಮಹತ್ಯೆಗೆ ಶರಣು

ಬೆಂಗಳೂರು: ಕೊರೊನಾದಿಂದಾಗಿ ಎಲ್ಲ ವಲಯಗಳಿಗೂ ಎಫೆಕ್ಟ್ ಆಗಿದ್ದು, ಸಿನಿಮಾ ರಂಗ ಸ್ಥಗಿತಗೊಂಡು ನೂರಾರು ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿರುವ ಲೋಕೇಶ್ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾ ಲಾಕ್‍ಡೌನ್ ಆದಾಗಿನಿಂದ ಕೆಲಸವಿಲ್ಲದೆ ಲೋಕೇಶ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಮೂಲತಃ ನಾಗಮಂಗಲದವರಾಗಿದ್ದ ಲೋಕೇಶ್ ಕೆಲಸದ ನಿಮಿತ್ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದ ಲೋಕೇಶ್ ಸೋದರನ ಜೊತೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಲ್ ಬಾಟಮ್ ಟು ಹಾಗೂ ಬನಾರಸ್ ಸಿನಿಮಾಗೆ ಕೆಲಸ ಮಾಡಬೇಕಿತ್ತು. ಆದ್ರೆ ಲಾಕ್‍ಡೌನ್ ಆಗಿದ್ದರಿಂದ ಸಿನಿಮಾದ ಕೆಲಸ ಸಹ ಸ್ಥಗಿತಗೊಂಡಿತ್ತು. ಲಾಕ್‍ಡೌನ್ ವೇಳೆ ಒಂಟಿಯಾಗಿದ್ದ ಲೋಕೇಶ್ ಖಿನ್ನತೆಗೆ ಒಳಗಾಗಿದ್ದರು. ಕಷ್ಟ ಅಂತ ಕೇಳಿದ್ದರೆ ಸಹಾಯ ಮಾಡ್ತಿದ್ದ, ಸ್ವಾಭಿಮಾನಿ ಲೋಕೇಶ್ ಯಾರ ಬಳಿ ಕೈಚಾಚುವವರಲ್ಲ. ಕೊರೊನಾ ಕಾಟ, ಒಂಟಿತನ, ಆರ್ಥಿಕ ಸಂಕಷ್ಟ, ಇದೆಲ್ಲವೂ ಸೇರಿ ಲೋಕೇಶ್ ಅವರನ್ನ ಬಲಿ ಪಡೆದಿವೆ ಎಂದು ನಿರ್ಮಾಪಕ ಸಂತೋಷ್ ಸಂತಾಪ ಸೂಚಿಸಿದ್ದಾರೆ.

ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಲೋಕೇಶ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಿರ್ದೇಶಕ ಜಯತೀರ್ಥ ಸೇರಿದಂತೆ ಹಲವು ಆಪ್ತರು ರಾಮಯ್ಯ ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ನಾಗಮಂಗಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Comments

Leave a Reply

Your email address will not be published. Required fields are marked *