ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ – ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

ಶಿವಮೊಗ್ಗ: ಜಿಲ್ಲೆಯ ತಿಲಕ್ ನಗರ, ಕುವೆಂಪು ರಸ್ತೆ, ರಾಜೇಂದ್ರನಗರ, ಚಂದ್ರಶೇಖರ್ ಆಜಾದ್ ಪಾರ್ಕ್, ಬಾಪೂಜಿ ನಗರದ ಸಮುದಾಯ ಭವನ, ಅಲ್ಕೊಳ ಸರ್ಕಲ್ ನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ಕುವೆಂಪು ರಸ್ತೆಯಲ್ಲಿ ಚರಂಡಿ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ ಒಡೆದಿದ್ದರೂ ಸರಿಪಡಿಸದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳೀಯರು ದೂರು ನೀಡಿದರೂ ಯಾಕೆ ಸರಿ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡು ಸಂಜೆ ಒಳಗೆ ದುರಸ್ತಿ ಮಾಡಬೇಕೆಂದು ಸೂಚಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ನಂತರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಾರಂಭಗೊಂಡ ಮೊದಲು ಯಾವ ರೀತಿ ನಡೆಯುತ್ತದೆ ಎಂಬ ಅನುಮಾನವಿತ್ತು. ಈಗ ಸ್ಮಾರ್ಟ್ ಸಿಟಿಗೆ ಎಂ.ಡಿ. ಮ್ಯಾನೇಜರ್, ಎಂಜಿನಿಯರ್ಸ್ ಹಾಗೂ ಸಿಬ್ಬಂದಿ ಬಂದಿದ್ದಾರೆ. ಈಗ ಎಲ್ಲಾ ಇಂಜಿನಿಯರ್ಸ್‍ಗಳಿಗೆ ಕಾಮಗಾರಿಗಳ ಟಾರ್ಗೆಟ್ ನೀಡಲಾಗಿದೆ. ಇದರಿಂದ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಮುಗಿಸುತ್ತಿದ್ದಾರೆ ಎಂದು ಹೇಳಿದರು.

ಇನ್ನು ಕೋವಿಡ್ ಸಂದರ್ಭದಲ್ಲಿ ಕಾಮಗಾರಿ ಕುಂಠಿತವಾಗಿತ್ತು. ಈಗ ಕಳೆದ ಮೂರು ತಿಂಗಳಿನಿಂದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವುದರಿಂದ ನಗರದಲ್ಲಿ ಧೂಳು ಸಹಜವಾಗಿ ಬರುತ್ತಿದೆ. ಆದರೂ ಸಹ ಜನರು ಸಹಿಸಿಕೊಂಡಿದ್ದಾರೆ. ರಸ್ತೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಉಳಿದ ಕಾಮಗಾರಿಯನ್ನು ಮಳೆಗಾಲದ ಒಳಗೆ ಮುಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನೂರರಲ್ಲಿ ಎರಡು ಕಾಮಗಾರಿಗಳು ಮಾತ್ರ ನಿಧಾನ ಆಗಿರಬಹುದು. ಅದನ್ನು ಬೇಗ ಮುಗಿಸಲಾಗುವುದು ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಮೇಯರ್ ಸುವರ್ಣ ಶಂಕರ್ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

Comments

Leave a Reply

Your email address will not be published. Required fields are marked *