ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್, ಇದೊಂದು ಗಿಮಿಕ್: ಪ್ರಿಯಾಂಕ್ ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಇದೊಂದು ಗಿಮಿಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಬಡ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೀಡಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತಾಪಿ ವರ್ಗ ಲಾಕ್‍ಡೌನ್ ನಿಂದಾಗಿ ತೀವ್ರ ಹಾನಿ ಅನುಭವಿಸಿದೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಟ ಅನುಭವಿಸಿದ್ದಾರೆ. ಇವರಿಗೆ ಪ್ರಧಾನಿ ಮೋದಿ ನಿರಾಸೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಜನ ಪ್ರಧಾನಿಯವರ ಭಾಷಣದಲ್ಲಿ ಅವರ ಬದುಕಿಗೆ ಸ್ಥಿರ ಭರವಸೆಗಳನ್ನು ನೀಡುತ್ತಾರೆಂದು ನಿರೀಕ್ಷಿಸಿದ್ದರು. ಆದರೆ ಪ್ರಧಾನಿಯವರ ಅರ್ಧ ತಾಸಿನ ಭಾಷಣದಲ್ಲಿ ಹೆಚ್ಚಿನ ಅವಧಿಯನ್ನು ಪ್ರಮುಖವಲ್ಲದ ವಿಷಯಕ್ಕೆ ಮೀಸಲಿಟ್ಟು, ಕೇವಲ ಎರಡು ನಿಮಿಷದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಈ ಪ್ಯಾಕೇಜ್ ಘೋಷಿಸಿದರು. ಇದು ದೇಶದ ಬಹುಪಾಲು ಜನರಿಗೆ ನಿರಾಸೆ ಉಂಟು ಮಾಡಿದೆ. ಹೀಗಾಗಿ ಇದೂ ಕೂಡ ಗಿಮಿಕ್ ಎಂದು ದೂರಿದರು.

20 ಲಕ್ಷ ಕೋಟಿ ರೂ. ಮೊತ್ತದಲ್ಲಿ ಈ ಹಿಂದೆ ಘೋಷಿಸಲಾದ ಕೇಂದ್ರ ಸರಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಪ್ರಧಾನಿ ಯಾವುದೇ ಸ್ಪಷ್ಟತೆ ನೀಡಲಿಲ್ಲ. ಹಣಕಾಸು ಸಚಿವರು ವಿವರವಾಗಿ ಹೇಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಸ್ವತಃ ಪ್ರಧಾನಿಗಳೇ ಜನರಿಗೆ ತಿಳಿಸಬಹುದಿತ್ತಲ್ಲ, ಅವರಿಗಿಂತ ದೊಡ್ಡವರು ಯಾರಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *