ಸೋಮವಾರದಿಂದ ಕೆಲಸಕ್ಕೆ ಹಾಜರಾಗಿ- ಬಿಎಂಟಿಸಿಯಿಂದ ನೌಕರರಿಗೆ ಸೂಚನೆ

ಬೆಂಗಳೂರು: ಸೋಮವಾರದಿಂದ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿಯಿಂದ ನೌಕರರಿಗೆ ಸೂಚಿಸಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸೋಮವಾರದಿಂದ ಬಸ್ ಸಂಚಾರ ಇರುತ್ತದೆ ಎಂದು ತಿಳಿಸಲಾಗಿದ್ದು, ಈ ಮೂಲಕ ಸೋಮವಾರದಿಂದ ಬಿಎಂಟಿಸಿ ಸಂಚಾರ ಆರಂಭವಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನೌಕರರಿಗೆ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣ, ಶಾಂತಿನಗರ ಸಾರಿಗೆ ಘಟಕ, ಶಾಂತಿ ನಗರ ಬಿಎಂಟಿಸಿ ಆಸ್ಪತ್ರೆ, ಯಶವಂತಪುರ ಬಿಎಂಟಿಸಿ ಘಟಕ, ಕೆಂಗೇರಿ ಟಿಟಿಎಂಸಿ ಹಾಗೂ ಹೆಣ್ಣೂರು ಘಟಕಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಶುಕ್ರವಾರ ಸುತ್ತೋಲೆ ಹೊರಡಿಸಿದ್ದ ಬಿಎಂಟಿಸಿ, ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭವಾಗುವ ಸುಳಿವನ್ನು ನೀಡಿತ್ತು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿದ ಹಿನ್ನೆಲೆ ಬಿಎಂಟಿಸಿ ಸೇರಿದಂತೆ ಎಲ್ಲಾ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಕೆಲ ಬಿಎಂಟಿಸಿ ಬಸ್‍ಗಳು ತುರ್ತು ಆರೋಗ್ಯ ಸೇವೆಗಾಗಿ ರಸ್ತೆಗೆ ಇಳಿದಿದ್ದವು.

ಈಗ ಸರ್ಕಾರವು ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಾರಿಗೆ ಇಲಾಖೆಯನ್ನು ಅಗತ್ಯ ಸೇವೆ ಸಲ್ಲಿಸುವ ಇಲಾಖೆ ಎಂದು ಪರಿಗಣಿಸಿದೆ. ಸದರಿ ಇಲಾಖೆಯಲ್ಲಿ ಬಿಎಂಟಿಸಿಯು ಒಳಪಡುತ್ತದೆ. ಆದ್ದರಿಂದ ಮೇ 17ರಂದು ಲಾಕ್‍ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಮೇ 18ರಿಂದ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿತ್ತು.

ಈ ಹಿಂದೆಯೇ ಬಿಎಂಟಿಸಿ ನೌಕರರಿಗೆ ಆಡಳಿತ ಮಂಡಳಿ ಕೆಲಸಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರೂ ಸದ್ಯ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ.

Comments

Leave a Reply

Your email address will not be published. Required fields are marked *