ಸೋಂಕಿತ ಮಹಿಳೆಯ ಅಂತ್ಯಕ್ರಿಯೆಗೆ ಸಾಥ್ ಕೊಟ್ಟ ಪಿಎಫ್‍ಐ ಕಾರ್ಯಕರ್ತರು

ಮಂಗಳೂರು: ಕೊರೊನಾ ಸೋಂಕಿಗೆ ಬಲಿಯಾದ ಮಂಗಳೂರಿನ ಎರಡನೇ ಮೃತ ದೇಹದ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಇಂದು ಕೊರೊನಾ ಸೋಂಕಿನಿಂದ ಮೃತರಾದ ಉಳ್ಳಾಲ ನಿವಾಸಿ ಮಹಿಳೆಯ ದಫನ್ ಕಾರ್ಯವನ್ನು ರಫೀಕ್ ಉಳ್ಳಾಲರವರ ನೇತೃತ್ವದಲ್ಲಿ ಉಳ್ಳಾಲದ ಮಸೀದಿಯಲ್ಲಿ ನೆರವೇರಿಸಲಾಯಿತು. ಉಳ್ಳಾಲದ ಸ್ಥಳೀಯ ಯುವಕರು ಸ್ವಯಂಪ್ರೇರಿತರಾಗಿ ಸಹಕರಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸ್ಥಳೀಯ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಮೊದಲು ಜೂನ್ 23ರಂದು ಮಂಗಳೂರಿನಲ್ಲಿ ಮೃತರಾದ ವ್ಯಕ್ತಿಯ ದಫನ್ ಕಾರ್ಯವನ್ನೂ ಪಿಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಮುಝೈರ್ ಕುದ್ರೋಳಿಯವರ ತಂಡ ಮಂಗಳೂರಿನ ಬೋಳಾರದ ಮಸೀದಿಯಲ್ಲಿ ನೆರವೇರಿಸಲಾಯಿತು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಪಿಎಫ್‍ಐ ವತಿಯಿಂದ ಆಯ್ದ 30 ಮಂದಿ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೊರೊನಾ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರದ ಮಾಹಿತಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ.ನವೀನ್ ಕುಮಾರ್ ಅವರಿಂದ ತರಬೇತಿ ನೀಡಲಾಗಿತ್ತು. ಇಲ್ಲಿ ತರಬೇತಿ ಪಡೆದ ಪಿಎಫ್‍ಐ ಕಾರ್ಯಕರ್ತರ ತಂಡ ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆಯ ನಿರ್ದೇಶನದಂತೆ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸುತ್ತಿದೆ. ಮುಂದೆಯೂ ಈ ತಂಡ ಇಂತಹ ಕೆಲಸಕ್ಕೆ ಸನ್ನದ್ದವಾಗಿದ್ದು, ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರವಾಗಿದೆ.

Comments

Leave a Reply

Your email address will not be published. Required fields are marked *