ಸೋಂಕಿತನಿಗೆ ಚಿಕಿತ್ಸೆ ನೀಡದೆ ಕಿಮ್ಸ್‌ಗೆ ಕಳುಹಿಸಿದ ಆಸ್ಪತ್ರೆಗೆ ನೋಟಿಸ್

– ಅರೆ ಬೆಂದ ಆಹಾರ ನೀಡಿದವರಿಗೂ ನೋಟಿಸ್
– ಧಾರವಾಡ ಜಿಲ್ಲಾಧಿಕಾರಿಗಳಿಂದ ಕ್ರಮ

ಧಾರವಾಡ: ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲೇ ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಹಾಗೂ ಕೋವಿಡ್-19 ಕೇಂದ್ರಗಳಲ್ಲಿ ಎಡವಟ್ಟುಗಳು ಹೆಚ್ಚುತ್ತಿದ್ದು, ಸೋಂಕಿತರನ್ನು ಆತಂಕಕ್ಕೀಡು ಮಾಡಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದೆ ಕಿಮ್ಸ್ ಗೆ ಕಳುಹಿಸಿದ್ದ ಹುಬ್ಬಳ್ಳಿಯ ವಿವೇಕಾನಂದ ಖಾಸಗಿ ಆಸ್ಪತ್ರೆಗೆ ನೋಟಿಸ್ ನೀಡುವುದಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದು, ಮಾತ್ರವಲ್ಲದೆ ಕೊವಿಡ್-19 ಕೇಂದ್ರದಲ್ಲಿ ಅರೆ ಬೆಂದ ಅನ್ನ ಕೊಟ್ಟವರಿಗೂ ನೋಟಿಸ್ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇಬ್ಬರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದೆ ವಿವೇಕಾನಂದ ಆಸ್ಪತ್ರೆಯವರು ಹುಬ್ಬಳ್ಳಿ ಕಿಮ್ಸ್‍ಗೆ ಕಳುಹಿಸಿದ್ದರು. ಈ ಹಿನ್ನೆಲೆ ನೋಟಿಸ್ ಕೊಡುತಿದ್ದೆವೆ. ವಿವೇಕಾನಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಆಸ್ಪತ್ರೆಯವರು ಕಿಮ್ಸ್‍ಗೆ ಕಳುಹಿಸಿದ್ದರಿಂದ ಸೋಂಕಿತರು ಅಲ್ಲಿ ಚಿಕಿತ್ಸೆಗೆ ಕಾಯಬೇಕಾಯಿತು ಎಂದು ಜಿಲ್ಲಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಂಕಿತರು ಮೊದಲೇ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು, ವಿವೇಕಾನಂದ ಆಸ್ಪತ್ರೆ ಖಾಸಗಿ ಕೊವಿಡ್-19 ಕೇರ್ ಸೆಂಟರ್ ಲಿಸ್ಟನಲ್ಲಿ ಕೂಡ ಇದೆ. ಆದರೂ ಕಿಮ್ಸ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯ ಹೆಗ್ಗೆರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಐಎಲ್‍ಐ ರೋಗಿಗಳಿಗೆ ಅರೆ ಬೆಂದ ಅನ್ನ ಕೊಟ್ಟಿರುವ ಹಿನ್ನೆಲೆ, ಫುಡ್ ಸೆಫ್ಟಿ ಆಫೀಸರ್ ಕಡೆಯಿಂದ ಫುಡ್ ಸಪ್ಲೈಯರ್ ಗೆ ನೋಟಿಸ್ ನೀಡಲಾಗಿದೆ. ಸದ್ಯ ಫುಡ್ ಸಪ್ಲೈಯರ್ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವದಾಗಿ ಹೇಳಿದ್ದಾರೆ ಎಂದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕೊವಿಡ್-19 ಕೇರ್ ಸೆಂಟರ್‍ನಲ್ಲಿರುವ ರೋಗಿಗಳಿಗೆ ಸೋಂಕಿನ ಲಕ್ಷಣ ಕಂಡು ಬಂದರೆ ಕಿಮ್ಸ್‍ಗೆ ರವಾನೆ ಮಾಡಲಿ, ಇದಕ್ಕಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಿಮ್ಸ್‍ನಲ್ಲಿ ಬೆಡ್ ಕೊರತೆ ಇಲ್ಲ, 250 ಬೆಡ್‍ಗಳಲ್ಲಿ 190 ಭರ್ತಿಯಾಗಿವೆ, ಇನ್ನೂ 60 ಬೆಡ್ ಖಾಲಿ ಇವೆ. ಎಸ್‍ಡಿಎಂ ಆಸ್ಪತ್ರೆಯಲ್ಲಿ 100 ಬೆಡ್ ಇವೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *