ಸೊಸೆಯಿಂದ ತನ್ನನ್ನು ರಕ್ಷಿಸಿ – 90 ವರ್ಷದ ವೃದ್ಧೆ ಕಿರುಚಾಡುತ್ತಿರೋ ವೀಡಿಯೋ ವೈರಲ್

ನವದೆಹಲಿ: ಮಾಹಿತಿ ನೀಡದೇ ಮನೆಯಿಂದ ಹೊರ ಹೋಗಿದ್ದ 90 ವರ್ಷದ ವೃದ್ಧ ಅತ್ತೆಗೆ ಬ್ರೂಮ್ ನಿಂದ 60 ವರ್ಷದ ಸೊಸೆ ಹಲ್ಲೆ ಮಾಡಿರುವ ಘಟನೆ ಆಗ್ರಾದ ಬಹುಪುರ ಪ್ರದೇಶದಲ್ಲಿ ನಡೆದಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅತ್ತೆ ಮಾಯಾದೇವಿ ತನ್ನನ್ನು ಸೊಸೆಯಿಂದ ರಕ್ಷಿಸುವಂತೆ ಕಿರುಚಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಈ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಆಗ್ರಾ ಪೊಲೀಸರು ಮುನ್ನಿದೇವಿ ವಿರುದ್ಧ ಐಪಿಸಿ ಸೆಕ್ಷನ್ 151 ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡಿದ್ದರು. ಬಳಿಕ ಸೊಸೆ ಮುನ್ನಿ ದೇವಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು, ಇದೀಗ ಜಾಮೀನಿನ ಆಧಾರದ ಮೇಲೆ ಮುನ್ನಿದೇವಿಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಕೆ. ವೆಂಕಟ್ ಅಶೋಕ್, ಇಬ್ಬರು ಮಹಿಳೆಯರು ವಿಧವೆಯರಾಗಿದ್ದು, ಬಹುಪುರ ಗ್ರಾಮದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ವಿಚಾರಣೆ ವೇಳೆ ತನ್ನ ಅತ್ತೆ ಮಾಯಾದೇವಿ ಮಾಹಿತಿ ನೀಡದೇ ಮನೆಯಿಂದ ಹೋಗುವ ಅಭ್ಯಾಸವಿದೆ. ಹಾಗೂ ಅವರಿಗಾಗಿ ನಾನು ಗ್ರಾಮವೆಲ್ಲಾ ಹುಡುಕಾಟ ನಡೆಸಿ ಬಳಿಕ ಬೇಸರಗೊಂಡು ಹೊಡೆದಿದ್ದೇನೆ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದೀಗ ಪೊಲೀಸರು ವೃದ್ಧ ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸದಂತೆ ತಿಳಿಸಿದ್ದು, ಆಕೆಗೆ ಗೌರವ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಮಾಯಾದೇವಿ ಸೇವಿಸಲು ಆಹಾರ ನೀಡಿ ಮುಂದೆ ಆಕೆಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *