ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆ – ಅಧಿಕಾರಿಗಳ ಯಡವಟ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ತಣ್ಣೀರು

-ಒಎಂಆರ್ ಶೀಟ್, ಪ್ರಶ್ನೆಪತ್ರಿಕೆ ಅದಲು ಬದಲು
– ಜಿಲ್ಲಾಡಳಿತದೊಂದಿಗೆ ಪೋಷಕರ ಗಲಾಟೆ

ಚಿತ್ರದುರ್ಗ: ಕನ್ನಡ ಹಾಗು ಆಂಗ್ಲ ಮಾಧ್ಯಮದ ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟನ್ನು ಪರೀಕ್ಷಾ ವೀಕ್ಷಕರು ಅದಲು ಬದಲು ಮಾಡಿ ವಿದ್ಯಾರ್ಥಿಗಳಿಗೆ ನೀಡಿರುವ ಪರಿಣಾಮ ಕೇಂದ್ರ ಸರ್ಕಾರದ ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತಣ್ಣೀರು ಹಾಕಿದಂತಾಗಿದೆ.

ಚಿತ್ರದುರ್ಗದ ಬಾಪೂಜಿ ಪರೀಕ್ಷಾ ಕೇಂದ್ರದಲ್ಲಿ ಇಂದು ಎನ್‍ಡಿಎ ಅಡಿಯಲ್ಲಿ ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಗೆ ದೇಶದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಅವರ ಪೋಷಕರೊಂದಿಗೆ ಇಂದು ಬೆಳಿಗ್ಗೆ 10 ಗಂಟೆಗೆ ಧಾವಿಸಿದ್ದರು. ನಂತರ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಆಂಗ್ಲ ಭಾಷೆಯ ಬದಲಾಗಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪತ್ರಿಕೆ, ಓಎಂಆರ್ ಶೀಟ್ ಹಾಗೂ ಕನ್ನಡ ಮಾದ್ಯಮದವರಿಗೆ ಆಂಗ್ಲ ಭಾಷೆಯ ಪ್ರಶ್ನೆ ಪತ್ರಿಕೆ, ಓಎಂಆರ್ ಶೀಟ್ ನೀಡಿ ಪರೀಕ್ಷೆ ಬರೆಸಿದ್ದಾರೆ. ಪರೀಕ್ಷೆ ಆರಂಭವಾಗಿ ಒಂದು ಗಂಟೆಯ ಬಳಿಕ ಎಚ್ಚೆತ್ತು ಮತ್ತೆ ಉತ್ತರಪತ್ರಿಕೆಯನ್ನು ಅದಲು, ಬದಲು ಮಾಡಿ ಬರೆಸಿದ್ದಾರೆ. ಇದರಿಂದಾಗಿ ವರ್ಷವಿಡಿ ಸೈನಿಕ ಶಾಲೆ ಸೇರಲು ತಯಾರಿ ನಡೆಸಿ ಅಂತಿಮವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇದೀಗ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಸಹ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಅಧಿಕಾರಿಗಳ ಅಚಾತುರ್ಯವೇ ಎಡವಟ್ಟಿಗೆ ಕಾರಣವೆಂದು ವಿದ್ಯಾರ್ಥಿಗಳ ಪೋಷಕರು ಜಿಲ್ಲಾಡಳಿತದ ನಿರ್ಲಕ್ಷ್ಯ ವಿರುದ್ಧ ಕಿಡಿ ಕಾರುತ್ತಿದ್ದು, ಪರೀಕ್ಷೆಯಲ್ಲಿ ಓಎಂಆರ್ ಶೀಟ್ ಬದಲಾವಣೆ ಹೇಗಾಯಿತು ಎಂದು ಅಧಿಕಾರಿಗಳ ಬಳಿ ಪ್ರಶ್ನೆ ಎತ್ತಿದ್ದಾರೆ.

ಅಧಿಕಾರಿಗಳ ಈ ಅಚಾತುರ್ಯದಿಂದಾಗಿ 400 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬದಲಿ ಓಎಂಆರ್ ಶೀಟ್ ನೀಡಲಾಗಿದೆ. ಹೀಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಬದಲಿ ಪರೀಕ್ಷೆ ನೀಡಬೇಕೆಂಬ ಆಗ್ರಹಿಸಿದ್ದಾರೆ.

ಪರೀಕ್ಷೆಗೆಂದು ಬಂದಿದ್ದ ವಿದ್ಯಾರ್ಥಿಗಳು ಒಂದು ತಿಂಗಳಿಗೆ ಸುಮಾರು ಐದಾರು ಸಾವಿರ ರೂಪಾಯಿ ಖರ್ಚು ಮಾಡಿಕೊಂಡು ತರಬೇತಿ ಪಡೆದು ಪರೀಕ್ಷೆಗೆ ಧಾವಿಸಿದ್ದ ವಿದ್ಯಾರ್ಥಿಗಳ ಮುಂದಿನ ಗತಿ ಏನೆಂದು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಜೊತೆ ವಿದ್ಯಾರ್ಥಿಗಳು ಮತ್ತು ಪೋಷಕರು ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಚಿತ್ರದುರ್ಗ ನಗರ ಠಾಣೆ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು.

Comments

Leave a Reply

Your email address will not be published. Required fields are marked *