ಸೇನಾ ವಾಹನದ ಮೇಲೆ ಉಗ್ರರಿಂದ ಗ್ರೇನೆಡ್ ದಾಳಿ – ಆರು ನಾಗರಿಕರಿಗೆ ಗಾಯ

– ಸರ್ಕಾರಿ ಉದ್ಯೋಗಿ ಸೇರಿ ಮೂವರು ಉಗ್ರರ ಬಂಧನ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಸೇನಾ ವಾಹನದ ಮೇಲೆ ಗ್ರೇನೆಡ್ ದಾಳಿ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು, ಚಲಿಸುತ್ತಿದ್ದ ಸೇನಾ ವಾಹನದ ಮೇಲೆ ಗ್ರೆನೆಡ್ ಎಸೆಯಲಾಗಿದೆ. ಆದರೆ ಅದು ರಸ್ತೆಯಲ್ಲಿ ಬಿದ್ದು ಸ್ಫೋಟಗೊಂಡಿದ್ದು, ಈ ವೇಳೆ ಸ್ಥಳದಲ್ಲಿ ಇದ್ದ ಆರು ಮಂದಿ ನಾಗರಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು, ಭಯೋತ್ಪಾದಕರು ಇಂದು ಬಾರಾಮುಲ್ಲಾದಲ್ಲಿ ಭಾರತೀಯ ಸೇನೆಯ ವಾಹನದ ಮೇಲೆ ಗ್ರೇನೆಡ್ ದಾಳಿ ಮಾಡಿದ್ದಾರೆ. ಆದರೆ ಅದು ವಾಹನಕ್ಕೆ ಬೀಳದೆ ತಪ್ಪಿಸಿಕೊಂಡು ರಸ್ತೆಯಲ್ಲಿ ಸ್ಫೋಟಗೊಂಡಿದ್ದು, ಸ್ಥಳದಲ್ಲಿದ್ದ ಆರು ನಾಗರಿಕರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ 9:25ರ ಸುಮಾರಿಗೆ ಉತ್ತರ ಕಾಶ್ಮೀರ ಜಿಲ್ಲೆಯ ಸೊಪೋರ್ ಪ್ರದೇಶದ ವಾರ್ಪೋರಾ ಪೊಲೀಸ್ ಪೋಸ್ಟ್ ಮೇಲೆ ಭಯೋತ್ಪದಕರು ಗ್ರೇನೆಡ್ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಹಾನಿಯಾಗಿರಲಿಲ್ಲ. ಇದಾದ ಒಂದು ದಿನದ ಬಳಿಕ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಗ್ರೇನೆಡ್ ದಾಳಿ ಮಾಡಲಾಗಿದೆ.

ಇದರ ಜೊತೆ ಇಂದು ಪ್ರತ್ಯೇಕ ಪ್ರಕರಣದಲ್ಲಿ, ಲಷ್ಕರ್-ಇ-ತೊಯ್ಬಾ ಉಗ್ರಸಂಘಟನೆ ಮೂವರು ಉಗ್ರರನ್ನು ಬಂಧಿಸಲಾಗಿದೆ. ಈ ಉಗ್ರರು ಕಾಶ್ಮೀರದಲ್ಲಿ ಉಗ್ರಕೃತ್ಯಗಳನ್ನು ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಜೊತೆಗೆ ಇವರು ಪಾಕಿಸ್ತಾನದ ಐಎಸ್‍ಐ ಅಧಿಕಾರಿ ಮೊಹಮ್ಮದ್ ಖಾಸೀಂ ಜೊತೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಉಗ್ರರಲ್ಲಿ ಓರ್ವ ಸರ್ಕಾರಿ ಉದ್ಯೋಗಿ ಕೂಡ ಇದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *