ಸೆ.4ರಂದೇ ಎಸ್‍ಪಿಬಿ ಕೊರೊನಾ ನೆಗೆಟಿವ್- ಅಂತಿಮ ದರ್ಶನಕ್ಕೆ ವ್ಯವಸ್ಥೆ

– ಕೇವಲ ಗಣ್ಯರಿಗೆ ಮಾತ್ರ ಅವಕಾಶ

ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಕುರಿತು ನಗರದ ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 4ರಂದೇ ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ಸ್ಪಷ್ಟಪಡಿಸಿದೆ.

ಎಸ್‍ಪಿಬಿ ಅವರ ಮರಣದ ಬಳಿಕ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆಗಸ್ಟ್ 5ರಂದು ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಹಿನ್ನೆಲೆ ಆಗಸ್ಟ್ 14ರಂದು ಅವರ ಸ್ಥಿತಿ ಗಂಭೀರವಾಯಿತು. ಅವರ ಆರೋಗ್ಯವನ್ನು ನುರಿತ ತಜ್ಞ ವೈದ್ಯರು ನೋಡಿಕೊಳ್ಳುತ್ತಿದ್ದರು. ಅಲ್ಲದೆ ತರ್ತು ನಿರ್ವಹಣಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಸೆಪ್ಟೆಂಬರ್ 4ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ಆಸ್ಪತ್ರೆ ತಿಳಿಸಿದೆ.

ಇಂದು ಬೆಳಗ್ಗೆ ಸಹ ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದರು. ಅವರ ಆರೋಗ್ಯವನ್ನು ಹತೋಟಿಗೆ ತರಲು ತಜ್ಞ ವೈದ್ಯರು ಬಹಳಷ್ಟು ಪ್ರಯತ್ನಿಸಿದರು. ಆದರೆ ಕಾರ್ಡಿಯೋ ರೆಸ್ಪಿರೇಟರಿ(ಹೃದಯ ರಕ್ತನಾಳ) ಅರೆಸ್ಟ್ ನಿಂದಾಗಿ ಇಂದು(ಸೆಪ್ಟೆಂಬರ್ 25) ಮಧ್ಯಾಹ್ನ 1.04ಕ್ಕೆ ಅವರು ಸಾವನ್ನಪ್ಪಿದರು ಎಂದು ತಿಳಿಸಲು ವಿಷಾಧಿಸುತ್ತೇವೆ ಎಂದು ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.

ಅವರು ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಆಸ್ಪತ್ರೆ ವಿಷಾದ ವ್ಯಕ್ತಪಡಿಸಿದೆ. ಸುದ್ದಿ ಹೊರ ಬೀಳುವುದಕ್ಕೂ ಮುನ್ನ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದು, ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. 11-30ಕ್ಕೆ ಖ್ಯಾತ ನಿರ್ದೇಶಕ ಭಾರತಿ ರಾಜ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

ಎಸ್‍ಪಿಬಿ ಪುತ್ರಿ ಪಲ್ಲವಿ ಹಾಗೂ ನಿರ್ದೇಶಕ ಭಾರತಿ ರಾಜ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಕೊರೊನಾ ನೆಗೆಟಿವ್ ಹಿನ್ನೆಲೆ ಇಂದು ಸಂಜೆ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಆದರೆ ಕೇವಲ ಗಣ್ಯರಿಗಷ್ಟೇ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಂಜಿಎಂ ಆಸ್ಪತ್ರೆ ಮುಂಭಾಗ ಭದ್ರತೆಗಾಗಿ ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ.

Comments

Leave a Reply

Your email address will not be published. Required fields are marked *