ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ ಪ್ರಕರಣ- ಕಾಡಿನಲ್ಲಿ ಪ್ರಿಯಕರ ಅರೆಸ್ಟ್

ಬೆಂಗಳೂರು: ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೈಹಿಕವಾಗಿ ಬಳಸಿಕೊಂಡು ಪ್ರಿಯಕರ ಮೋಸ – ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ

ಆರೋಪಿ ದಿನೇಶ್‍ನನ್ನು ಸದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಚಂದನಾ (29) ಆತ್ಮಹತ್ಯೆ ಮಾಡಿಕೊಂಡ ನಟಿ. ಚಂದನಾ ಆತ್ಮಹತ್ಯೆ ಮಾಡಿಕೊಂಡ ನಂತರ ಆರೋಪಿ ದಿನೇಶ್ ಪರಾರಿಯಾಗಿದ್ದನು. ಈತನನ ವಿರುದ್ಧ ಚಂದನಾ ಪೋಷಕರು ದೂರು ದಾಖಲಿಸಿದ್ದರು. ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಪೊಲೀಸರು ಆರೋಪಿ ದಿನೇಶ್‍ಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದೀಗ ಪೊಲೀಸರು ಆರೋಪಿಯನ್ನು ಚಿಕ್ಕಮಗಳೂರು ಕಾಡಿನಲ್ಲಿ ಬಂಧಿಸಿದ್ದಾರೆ. ಇಷ್ಟು ದಿನ ಆರೋಪಿ ಕಾಡಿನಲ್ಲೇ ತಲೆಮರೆಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದಿನೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ ಮೇ 28 ರಂದು ಚಂದನಾ ವಿಷ ಕುಡಿದು ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಚಂದನಾ ಮತ್ತು ಪ್ರಿಯಕರ ದಿನೇಶ್ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಎರಡು ಮನೆಯಲ್ಲೂ ಇವರ ಮದುವೆಗೆ ಒಪ್ಪಿಗೆ ನೀಡಲಾಗಿತ್ತು.

ದಿನೇಶ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಹಣವನ್ನು ಪಡೆದುಕೊಂಡಿದ್ದನು. ಅಷ್ಟೇ ಅಲ್ಲದೇ ಆರೋಪಿ ಚಂದನಾರನ್ನು ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದನು. ಅಲ್ಲದೇ ಆರೋಪಿ ದಿನೇಶ್ ಚಂದನಾರಿಗೆ ಗರ್ಭಪಾತ ಕೂಡ ಮಾಡಿಸಿದ್ದನು ಎಂದು ತಿಳಿದು ಬಂದಿತ್ತು. ಕೊನೆಗೆ ಲಕ್ಷ, ಲಕ್ಷ ಹಣ ಪಡೆದು ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೇ ಆರೋಪಿ ಚಂದನಾರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನು. ಇದರಿಂದ ನೊಂದು ಚಂದನಾ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ನಟಿ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಿಯಕರ ತನ್ನ ಕುಟುಂಬದವರ ಜೊತೆ ಪರಾರಿಯಾಗಿದ್ದನು. ಸದ್ಯಕ್ಕೆ ಪೊಲೀಸರು ಆರೋಪಿ ದಿನೇಶ್‍ನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *