ಸೂಪರ್ ಸೈಕ್ಲೋನ್ ಅಂಫಾನ್ ಬಳಿಕ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಆಕಾಶ!

ನವದೆಹಲಿ: ತೀವ್ರ ಸ್ವರೂಪ ತಾಳಿದ್ದ ಅಂಫಾನ್ ಸೂಪರ್ ಸೈಕ್ಲೋನ್ ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ವಿಧ್ವಾಂಸವನ್ನು ಸೃಷ್ಟಿಸಿದೆ. ಗಂಟೆಗೆ ಸುಮಾರು 190 ಕಿಮಿ ವೇಗವಾಗಿ ಅಪ್ಪಳಿಸಿದ ಸೈಕ್ಲೋನ್ ಮಳೆ, ಗಾಳಿಯೊಂದಿಗೆ ಭಾರೀ ನಷ್ಟವನ್ನೇ ಉಂಟು ಮಾಡಿದೆ. ಮನೆಗಳು, ವಿದ್ಯುತ್ ಕಂಬಗಳು, ದೂರಸಂಪರ್ಕ ಸ್ಥಾವರಗಳು ನೆಲಕ್ಕೆ ಉರುಳಿದ್ದು, ಇದುವರೆಗೂ 12 ಮಂದಿ ಸೈಕ್ಲೋನ್‍ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ ಸೈಕ್ಲೋನ್ ಕುರಿತು ಅಲ್ಲಿನ ಸರ್ಕಾರಗಳು ಕೈಗೊಂಡಿದ್ದ ಮುನ್ನೆಚ್ಚರಿಕ ಕ್ರಮಗಳ ಕಾರಣದಿಂದ ಜೀವ ನಷ್ಟ ಕಡಿಮೆಯಾಗಿದ್ದರೂ, ಆಸ್ತಿ ನಷ್ಟ ಹೆಚ್ಚಾಗಿ ಸಂಭವಿಸಿದೆ.

ಸೈಕ್ಲೋನ್‍ಗೆ ಸಿಲುಕಿದ್ದ ಒಡಿಶಾ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಸದ್ಯದ ಪರಿಸ್ಥಿತಿಯ ಕುರಿತು ಸ್ಥಳೀಯರು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮಾಹಿತಿ ನೀಡಿದ್ದಾರೆ. ‘ಎಂತಹ ಕಷ್ಟದ ಸನ್ನಿವೇಶ ಎದುರಾದರೂ, ಅವುಗಳನ್ನು ಎದುರಿಸಿ ನನ್ನ ನಗರ ನಿಲ್ಲುತ್ತದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಚಂಡಮಾರುತ ಬಳಿಕ ಭುವನೇಶ್ವರ್ ನಗರ ಕಂಡಿದ್ದು ಹೀಗೆ ಎಂದು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದ್ದ ಅಗಸದ ಫೋಟೋಗಳನ್ನು ಸ್ಥಳೀಯರು ಶೇರ್ ಮಾಡಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಎದಿದ್ದ ಅಂಫಾನ್ ಚಂಡಮಾರುತ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ದೇಶಗಳಲ್ಲಿ ಸೈಕ್ಲೋನ್ ನಿಂದ ಬಿರುಗಾಳಿ ಸಹಿತ ಭಾರೀ ಮಳೆ ಆಗಿದೆ. ಸೈಕ್ಲೋನ್ ಕಾರಣದಿಂದ ಪಶ್ಚಿಮ ಬಂಗಾಳದಲ್ಲಿ ಸುಮಾರು 6.5 ಲಕ್ಷ ಹಾಗೂ ಒಡಿಶಾದಲ್ಲಿ ಸುಮಾರು 1.58 ಲಕ್ಷ ಜನರನು ಸ್ಥಳಾಂತರಿಸಲಾಗಿದೆ ಮೇ20 ರಂದು ಎನ್‍ಡಿಆರ್ ಎಫ್ ಮಾಹಿತಿ ನೀಡಿತ್ತು. ಇತ್ತ ಕೊರೊನಾಗಿಂತಲೂ ಸೈಕ್ಲೋನ್ ಪ್ರಭಾವ ರಾಜ್ಯದಲ್ಲಿ ಕೆಟ್ಟದಾಗಿದ್ದು, ಕೇಂದ್ರ ಸರ್ಕಾರ ಚಂಡಮಾರುತದಿಂದ ಉಂಟಾದ ಹಾನಿಗೆ ನೆರವು ನೀಡಬೇಕು ಎಂದು ಸಿಎಂ ಮಮತ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ಸೂಪರ್ ಸೈಕ್ಲೋನ್ ದುರ್ಬಲಗೊಂಡಿರುವುದಿಂದ ಎನ್‍ಡಿಆರ್ ಎಫ್ ಸಿಬ್ಬಂದಿ ರಸ್ತೆ ತೆರವು ಮತ್ತು ಜನ ಜೀವನದ ಪುನರ್ ಸ್ಥಾಪನೆ ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ.

ಒಡಿಶಾದಲ್ಲಿ ಅಂಫಾನ್ ಪ್ರಭಾವ ಕಡಿಮೆಯಾಗಿದ್ದು ಜನಜೀವನ ಸಾಮಾನ್ಯ ಸ್ಥಿತಿಗೆ ಮರುಳುತ್ತಿದೆ. ಹಲವು ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ. ಉಳಿದಂತೆ ದುರ್ಬಲಗೊಂಡಿರುವ ಸೈಕ್ಲೋನ್ ಗಂಟೆಗೆ 27 ಕಿಮೀ ವೇಗದಲ್ಲಿ ಉತ್ತರ-ಈಶಾನ್ಯ ಕಡೆಗೆ ಸಾಗುತ್ತಿದೆ. ಬಾಂಗ್ಲಾದೇಶದಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments

Leave a Reply

Your email address will not be published. Required fields are marked *