ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂದವರು ಶಾಕ್ ಆಗಿದ್ದು, ಎಲ್ಲರೂ ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್, ಅಜಯ್ ದೇವಗನ್, ನಟಿ ಬಿಪಾಶು ಬಸು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಸುಶಾಂತ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

ನಟ ಅಕ್ಷಯ್ ಕುಮಾರ್, “ಈ ಸುದ್ದಿ ನನಗೆ ಆಘಾತವನ್ನೂಂಟು ಮಾಡಿದೆ. ಸುದ್ದಿ ತಿಳಿದು ಮಾತೇ ಬರುತ್ತಿಲ್ಲ. ನಾನು ಸುಶಾಂತ್ ಸಿಂಗ್ ಅಭಿನಯಿಸಿದ್ದ ‘ಚಿಚೋರ್’ ಸಿನಿಮಾ ನೋಡಿ ತುಂಬಾ ಆನಂದಿಸಿದ್ದೆ. ಆಗ ನನ್ನ ಸ್ನೇಹಿತ, ‘ಚಿಚೋರ್’ ಸಿನಿಮಾ ನಿರ್ಮಾಪಕ ಸಾಜಿದ್‍ಗೆ ನಾನು ಸಿನಿಮಾ ನೋಡಿ ಎಷ್ಟು ಸಂತಸಪಟ್ಟೆ ಎಂದು ಹೇಳಿದ್ದೆ. ಅಲ್ಲದೇ ಆ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ಅಭಿನಯಿಸಬೇಕಿತ್ತು ಎಂದು ಹೇಳಿದ್ದೆ. ಸುಶಾಂತ್ ಪ್ರತಿಭಾವಂತ ನಟ. ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ದುಃಖದಿಂದ ಬರೆದುಕೊಂಡಿದ್ದಾರೆ.

“ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಎಂತಹ ದುರಂತ, ಅವನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸುಶಾಂತ್ ಕುಟುಂಬದವರಿಗೆ ನಟ ಅಜಯ್ ದೇವಗನ್ ಸಂತಾಪ ಸೂಚಿಸಿದರು.

“ನಿಜಕ್ಕೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟಿ ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *