ಸುಳ್ಳೇ ಮನೆ ದೇವರು ಆಗಿರೋ ಕಾಂಗ್ರೆಸ್ಸಿಗೆ ಇದು ಅರ್ಥ ಆಗಲ್ಲ: ಸಿಟಿ ರವಿ

ಬೆಂಗಳೂರು: ಜನರ ಜೀವಕ್ಕೆ ಹಣದ ಮುಖ ನೋಡದೆ ನಾವು ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ್ದೇವೆ. ಆದರೆ ಸುಳ್ಳೇ ಮನೆ ದೇವರು ಆಗಿರುವ ಕಾಂಗ್ರೆಸ್ಸಿಗೆ ಇದು ಆಗಲ್ಲ ಎಂದು ಸಚಿವ ಸಿಟಿ ರವಿ ಅವರು ವೈದ್ಯಕೀಯ ಕಿಟ್ ಗಳ ಖರೀದಿಯಲ್ಲಿ ಅಕ್ರಮ ಆಗಿದೆ ಅಂತ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಕಳ್ಳ ಪರರ ನಂಬ ಅನ್ನೋ ಗಾದೆ ಮಾತಿನಂತೆ ಸಿದ್ದರಾಮಯ್ಯ ಹೇಳಿಕೆ ಇದೆ. ಹಾಸಿಗೆ ದಿಂಬಿನಲ್ಲಿ ದುಡ್ಡು ಹೊಡೆದ ಖ್ಯಾತಿ ಸಿದ್ದರಾಮಯ್ಯ ಸಂಪುಟದ ಸಚಿವರಲ್ಲಿ ಇತ್ತು. ಇಂತದ್ದರಲ್ಲಿ ದುಡ್ಡು ಲೂಟಿ ಮಾಡೋ ಅವಶ್ಯತೆ ನಮಗೆ ಇಲ್ಲ. ನಮಗೆ ದುಡ್ಡು ಮುಖ್ಯ ಅಲ್ಲ ಜನರ ಜೀವ ಮುಖ್ಯ ಎಂದು ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಮಾಸ್ಕ್ ಕೂಡ ಸಿಗೋದು ಕಷ್ಟ ಆಗಿತ್ತು. ಜನರ ಜೀವಕ್ಕೆ ಹಣ ಮುಖ ನೋಡದೆ ನಾವು ಅಗತ್ಯ ವಸ್ತು ಖರೀದಿ ಮಾಡಿದ್ದೇವೆ. ಆದರೆ ಸುಳ್ಳೇ ಮನೆ ದೇವರು ಆಗಿರೋ ಕಾಂಗ್ರೆಸ್ಸಿಗೆ ಇದು ಅರ್ಥ ಆಗಲ್ಲ. ನಾನು ರಾಮುಲು, ಸುಧಾಕರ್ ಜೊತೆ ಮಾತಾಡಿದ್ದೇನೆ. ಬೇರೆ ರಾಜ್ಯದಲ್ಲಿ ಹೋಲಿಸಿದರೆ ನಾವು ಉತ್ತಮವಾಗಿ ವಸ್ತುಗಳ ಖರೀದಿ ಮಾಡಿದ್ದೇವೆ. ಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ಯಾವುದೇ ಅಕ್ರಮ ಆಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಜಿಮ್, ಸ್ವಿಮ್ಮಿಂಗ್ ಪೂಲ್ ಓಪನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸದ್ಯ ಇವುಗಳ ಪ್ರಾರಂಭಕ್ಕೆ ಕೇಂದ್ರ ಅನುಮತಿ ಕೊಟ್ಟಿಲ್ಲ. ಕೊರೊನಾ ಕಡಿಮೆ ಆದ ನಂತರ ಈ ಬಗ್ಗೆ ಚಿಂತನೆ ಮಾಡಬಹುದು. ಈಗಾಗಲೇ ಹೋಟೆಲ್ ಉದ್ದಿಮೆದಾರರು ಸಿಎಂ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದಕ್ಕೆ ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಸಿದ್ದರಾಮಯ್ಯ ಸಲಹೆ ಕೊಡೋದಾದ್ರೆ ಮಹಾರಾಷ್ಟ್ರದ ಅವರ ಆರೋಗ್ಯ ಸಚಿವರಿಗೆ ಸಲಹೆ ಕೊಡಲಿ. ಆದರೆ ಸಿದ್ದರಾಮಯ್ಯ ಮಾತು ಅವರ ಪಕ್ಷದಲ್ಲಿ ಕೇಳೊಲ್ಲ ಅಂತ ಅನ್ನಿಸುತ್ತೆ. ಅದಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಮೊದಲು ಮಹಾರಾಷ್ಟ್ರ ಆರೋಗ್ಯ ಮಂತ್ರಿಗೆ ಸಿದ್ದರಾಮಯ್ಯ ಸಲಹೆ ಕೊಡಲಿ ಎಂದು ಗರಂ ಆದರು.

ಗುತ್ತಿಗೆ ವೈದ್ಯರ ಪ್ರತಿಭಟನೆ ವಿಚಾರದ ಕುರಿತು ಮಾತನಾಡಿ, ಇಂತಹ ಸಮಯದಲ್ಲಿ ವೈದ್ಯರು ಸ್ವಲ್ಪ ಹೆಚ್ಚಾಗಿ ಮಾನವೀಯತೆ ತೋರಿಸಬೇಕು. ಇಂತಹ ಸಮಯದಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ರಾಜ್ಯದ ಪರ, ಜನರ ಪರ ಅವರು ನಿಲ್ಲಬೇಕು ಎಂದು ಅವರು ತಿಳಿಸಿದರು.

Comments

Leave a Reply

Your email address will not be published. Required fields are marked *