ಸುಧಾ ಮೂರ್ತಿಗೆ ಗೌರವ- ಆನೆ ಮರಿಗೆ ‘ಸುಧಾ’ ಹೆಸರು ನಾಮಕರಣ

ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನದ ಆನೆ ಮರಿಗೆ ಸುಧಾ ಮೂರ್ತಿ ಅವರ ಹೆಸರಿಡುವ ಮೂಲಕ ಉದ್ಯಾನವದ ಸಿಬ್ಬಂದಿ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷರಿಗೆ ಗೌರವ ಸಲ್ಲಿಸಿದ್ದಾರೆ.

ಇತ್ತೀಚೆಗೆ ಜೈವಿಕ ಉದ್ಯಾನವನದ ಎರಡು ಸಾಕಾನೆಗಳು ಮರಿಗಳಿಗೆ ಜನ್ಮ ನೀಡಿದ್ದವು. ಆಗಸ್ಟ್ 17 ರಂದು 45 ವರ್ಷ ವಯಸ್ಸಿನ ಸುವರ್ಣ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಇದರೊಂದಿಗೆ ಶಿಬಿರ ಆನೆಗಳ ಸಂಖ್ಯೆ 25ಕ್ಕೇರಿತ್ತು.

ಉದ್ಯಾನವನದ ಅಧಿಕಾರಿಗಳು ಆನೆ ಮರಿಗೆ ಹೆಸರಿಡಲು ಸಾರ್ವಜನಿಕರಿಂದ ಆನ್‍ಲೈನ್‍ನಲ್ಲಿ ಹೆಸರು ಸೂಚಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಬಹುತೇಕರು ಸುಧಾ ಮೂರ್ತಿ ಅವರ ಹೆಸರನ್ನು ಸೂಚಿಸಿದ್ದರು. ಇದೇ ಆಗಸ್ಟ್ 19 ರಂದು ಸುಧಾಮೂರ್ತಿ ಅವರು 70ನೇ ವಸಂತಕ್ಕೆ ಕಾಲಿಟ್ಟಿದ್ದರು.

ಈ ಕುರಿತು ಮಾಹಿತಿ ನೀಡಿರುವ ಬನ್ನೇರುಘಟ್ಟ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಬಿಪಿನ್ ಸಿಂಗ್ ಅವರು, ಆನೆ ಮರಿಗೆ ‘ಸುಧಾ’ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದರು. ಅಲ್ಲದೇ ಹಲವು ಬಾರಿ ಸುಧಾ ಮೂರ್ತಿ ಅವರೇ ವೈಯಕ್ತಿಕವಾಗಿ ಉದ್ಯಾನವನಕ್ಕೇ ಭೇಟಿ ನೀಡಿ ಕೆಲಸ ಮೇಲ್ವಿಚಾರಣೆ ಮಾಹಿತಿ ಪಡೆಯುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಗದಗ ಬಳಿ ಇರುವ ಬನ್ನೇರುಘಟ್ಟ ಉದ್ಯಾನವನದ ಮಿನಿ ಮೃಗಾಲಯದ ಅಭಿವೃದ್ಧಿಗೆ ಸುಧಾ ಮೂರ್ತಿ ಅವರು ಸಹಾಯ ಹಸ್ತಚಾಚಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *