ಸುದೀಪ್ ಹೆಸರಲ್ಲಿ 5 ಸಾವಿರ ಸ್ತ್ರೀಯರ ಮಹಾಸೇನೆ

ಬೆಂಗಳೂರು: ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿ ಸಂಘಗಳನ್ನು ಕಟ್ಟಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಟ ಕಿಚ್ಚನ ಮೇಲಿನ ಅಭಿಮಾನಕ್ಕಾಗಿ 5 ಸಾವಿರ ಸ್ತ್ರೀಯರು ಒಟ್ಟಾಗಿ ಒಂದು ಸಂಘವನ್ನು ಕಟ್ಟಿಕೊಳ್ಳುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

ಹೌದು. ಸ್ಯಾಂಡಲ್‍ವುಡ್ ಬಾದ್ ಷಾ ಕಿಚ್ಚನಿಗೆ ಅಪಾರವಾದ ಅಭಿಮಾನಿ ಬಳಗವಿದೆ. ಪುರುಷರಷ್ಟೇ ಸ್ತ್ರೀಯರ ಸಂಖ್ಯೆ ಕೂಡ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಸಂಘವಾಗಿದೆ. ಯುವಕರ ಗುಂಪು ಅಭಿಮಾನಿ ಸಂಘಗಳನ್ನು ಕಟ್ಟಿ ಕೊಂಡಿರುತ್ತಾರೆ. ಆದರೆ ಕಿಚ್ಚ ಸುದೀಪ್ ಅವರ ಮಹಿಳಾ ಅಭಿಮಾನಿಗಳು ಕೂಡ ಇಂಥದ್ದೊಂದು ಸಂಘ ಮಾಡಿಕೊಂಡು ಒಳ್ಳೆಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ವೀಡಿಯೋದಲ್ಲಿ ಏನಿದೆ?
ಚಿತ್ರರಂಗದಲ್ಲಿ 25 ವರ್ಷಗಳನ್ನು ಸುದೀಪ್ ಅವರು ಪೂರೈಸಿರುವುದರ ಸಂಭ್ರಮಕ್ಕಾಗಿ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನಲ್ಲಿರುವ ಮಹಿಳಾ ಅಭಿಮಾನಿಗಳು ಒಂದು ವೀಡಿಯೋ ಮೂಲಕ ಕಿಚ್ಚನಿಗೆ ಶುಭಾಶಯ ತಿಳಿಸಿ, ತಾವು ಮಾಡಿಕೊಂಡಿರುವ ಸಂಘದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

‘ಮಹಾ ಸೇವಕ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ’ ಎಂದು ನಮ್ಮ ಸಂಘಕ್ಕೆ ಹೆಸರಿಡಲಾಗಿದೆ. ಈ ಮಹಾಸೇನೆಯಲ್ಲಿ ಬರೀ ಮಹಿಳೆಯರೇ ಸಕ್ರಿಯರಾಗಿದ್ದೇವೆ. 5 ಸಾವಿರಕ್ಕೂ ಅಧಿಕ ಸ್ತ್ರೀಯರು ಸುದೀಪ್ ಮೇಲಿನ ಅಭಿಮಾನಕ್ಕಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇವೆ. ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಈ ಸಂಘ ಕಾರ್ಯ ನಿರ್ವಹಿಸುತ್ತದೆ. ಸುದೀಪ್ ಅವರ ಮಾರ್ಗದರ್ಶನದಲ್ಲಿ ತಾವು ಮುನ್ನಡೆಯುತ್ತೇವೆ ಎಂದು ಈ ಮಹಿಳಾ ಸೇನೆಯ ಸದಸ್ಯರು ವೀಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ವೀಡಿಯೋ ನೋಡಿದ ಸುದೀಪ್ ಅವರು ‘ಇದು ಮಧುರವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್ ಮೂಲಕವಾಗಿ ಪ್ರೀತಿಯ ಸಂದೇಶವನ್ನು ಅಭಿಮಾನಿಗಳಿಗೆ ಹೇಳಿದ್ದಾರೆ. ಕಿಚ್ಚನ ಅಭಿಮಾನಿಯ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಿನಿಮಾ ರಂಗ ಮಾತ್ರವಲ್ಲದೆ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ.

Comments

Leave a Reply

Your email address will not be published. Required fields are marked *