ಸುಂದರ ಪತ್ನಿಯಿದ್ರೂ ಮತ್ತೊಬ್ಬಾಕೆಯ ಬಾಹುಗಳಲ್ಲಿ ಸೆರೆಯಾದವನಿಂದ ಮಡದಿಯ ಕೊಲೆ?

– ನೇಣು ಬಿಗಿದ ರೀತಿಯಲ್ಲಿ ಮಹಿಳೆಯ ಶವ ಪತ್ತೆ
– ಮನೆಯ ಕಿಟಕಿಯಿಂದ ಗಂಡ ಎಸ್ಕೇಪ್

ಚಿಕ್ಕಬಳ್ಳಾಪುರ: ಪತ್ನಿಯನ್ನ ಕೊಂದು ಪತಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.

26 ವರ್ಷದ ಮಮತಾ ಪತಿ ಕುಮಾರ್ ನಿಂದ ಕೊಲೆಯಾದ ಪತ್ನಿ. ಆರು ವರ್ಷಗಳ ಹಿಂದೆ ಕುಮಾರ್ ಮತ್ತು ಮಮತಾ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿತ್ತು. ದಂಪತಿಗೆ ಮುದ್ದಾದ ಎರಡು ಮಕ್ಕಳಿವೆ. ರಾತ್ರಿ ಚೆನ್ನಾಗಿದ್ದ ಮಮತಾ ಬೆಳಗ್ಗೆ ಆಗುವಷ್ಟರಲ್ಲಿ ಹೆಣವಾಗಿದ್ದಾಳೆ. ಬೆಳಗ್ಗೆ ಮಮತಾ ಪೋಷಕರಿಗೆ ಏನಾಯ್ತು ಅಂತ ಗೊತ್ತಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾನೆ. ಶವದ ಕತ್ತಿನ ಭಾಗದಲ್ಲಿ ನೇಣು ಬಿಗಿದ ಗುರುತು ನೋಡಿದ ಮಮತಾ ಪೋಷಕರು ಅಳಿಯನನ್ನು ಹಿಡಿದು ಕೋಣೆಯಲ್ಲಿ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮನೆಯ ಕಿಟಕಿಯಿಂದ ಜಿಗಿದು ಕುಮಾರ್ ಎಸ್ಕೇಪ್ ಆಗಿದ್ದಾನೆ. ಕಳೆದ ಕೆಲ ದಿನಗಳಿಂದ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದನು. ಈ ಬಗ್ಗೆ ಪ್ರಶ್ನಿಸಿದ್ದ ಮಗಳನ್ನ ಕೊಲೆ ಮಾಡಿದ್ದಾನೆ ಎಂದು ಮಮತಾ ಪೋಷಕರು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಕೊಲೆ ಎಂದು ತಿಳಿದು ಬಂದಿದೆ. ಪರಾರಿಯಾಗಿರುವ ಆರೋಪಿಯನ್ನ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಎಸ್.ಪಿ.ಜಿ.ಕೆ.ಮಿಥುನ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *