ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

ಮುಂಬೈ: ಕೊರೊನಾ ವ್ಯಾಕ್ಸಿನ್ ತಯಾರಿಸುತ್ತಿರುವ ಪುಣೆ  ಸೀರಂ ಸಂಸ್ಥೆಯಲ್ಲಿ  ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಇಂದು ಮಧ್ಯಾಹ್ನ ನಿರ್ಮಾಣ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇಂಗ್ಲೆಂಡಿನ ಆಕ್ಸ್‌ಫರ್ಡ್‌  ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆ ಸೀರಂ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ಸಂಗ್ರಹಿಸಿಟ್ಟ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಆದರ್ ಪೂನವಾಲಾ ಟ್ವೀಟ್ ಮಾಡಿ, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಇದರಿಂದ ತೀವ್ರ ದುಃಖವಾಗಿದ್ದು, ಸಾವನ್ನಪ್ಪಿದವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಸತತ ಮೂರು ಗಂಟೆಗಳ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಇದೀಗ ನಾವು ಇಬ್ಬರನ್ನು ರಕ್ಷಿಸಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಬಳಿಕ ನಷ್ಟದ ಕುರಿತು ಲೆಕ್ಕ ಹಾಕಲಾಗುತ್ತದೆ ಎಂದು ಆದರ್ ಪೂನವಾಲಾ ತಿಳಿಸಿದ್ದಾರೆ.

ಸೀರಂ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಸಂಸ್ಥೆಯಾಗಿದ್ದು, 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.

Comments

Leave a Reply

Your email address will not be published. Required fields are marked *