ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ನೇಣಿಗೆ ಶರಣು

ಚಂಡೀಗಢ: ಸಿಬಿಐ ಮಾಜಿ ನಿರ್ದೇಶಕ, ನಾಗಲ್ಯಾಂಡ್ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಮ್ಲಾದ ಅವರ ನಿವಾಸದಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಅಶ್ವನಿ ಅವರ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಜೀವನದಲ್ಲಿ ತುಂಬಾನೆ ಬೇಸರಗೊಂಡಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಶ್ವನಿ ಬರೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಶ್ವನಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಾಕಿಂಗ್ ಹೋಗಿದ್ದರು. ಮನೆಯಲ್ಲಿರುವ ದೇವರ ಕೋಣೆಯಲ್ಲಿ ಅಶ್ವನಿ ಶವ ಪತ್ತೆಯಾಗಿದೆ. ಅವರ ಪತ್ನಿ, ಮಗ ಹಾಗೂ ಮಗಳು ಮನೆಯ ಕೆಳ ಮಹಡಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‍ಪಿ ಶಿಮ್ಲಾ ಮೋಹಿತ್, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ನಿಖರ ಕಾರಣ ತಿಳಿಯಬಹುದಾಗಿದೆ ಎಂದರು.

ಅಶ್ವನಿ ಅವರು ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಸಂಬಂಧ ಅವರ ಕುಟುಂಬಸ್ಥರು ಖಚಿತಪಡಿಸಿಲ್ಲ. ಆದರೂ ಘಟನೆ ಸಂಬಂಧ ಎಲ್ಲಾ ಆಯಾಮಗಳನ್ನು ತನಿಖೆ ನಡೆಸಲಾಗುವುದು. ಸಂಜೆ ವಾಕಿಂಗ್ ಹೋಗಿ ಬಂದಿದ್ದ ಅಶ್ವನಿ ಅವರು ಪ್ರಾರ್ಥನೆ ಸಲ್ಲಿಸಲೆಂದು ದೇವರ ಕೋಣೆಗೆ ಹೋಗಿದ್ದರು. ಹೀಗೆ ಹೋದವರು ಕೆಲ ಸಮಯವಾದರೂ ವಾಪಸ್ ಬರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ದೇವರ ಕೋಣೆಗೆ ಹೋಗಿ ನೋಡಿದಾಗ ಅಶ್ವನಿ ಅವರ ಶವ ಪತ್ತೆಯಾಗಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

ಅಶ್ವನಿಯವರು ಆಗಸ್ಟ್ 2006ರಿಂದ ಜುಲೈ 2008ರವರೆಗೆ ಹಿಮಾಚಲಪ್ರದೇಶದಲ್ಲಿ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. 2013ರಿಂದ 2014ರವರೆಗೆ ನಾಗಲ್ಯಾಂಡ್ ರಾಜ್ಯಪಾಲರಾಗಿ ಅಶ್ವನಿ ಕಾರ್ಯನಿರ್ವಹಿಸಿದ್ದರು.

Comments

Leave a Reply

Your email address will not be published. Required fields are marked *