ಸಿನಿಮಾ ಸ್ಟೈಲಿನಲ್ಲಿ ಪ್ರೇಯಸಿಯ ಕಿಡ್ನಾಪ್ ಪ್ರಕರಣ – ತುಮಕೂರಿನಲ್ಲಿ ಯುವತಿ ಪತ್ತೆ

– ಕಿಡ್ನಾಪರ್ಸ್ ಗೆ ಯಾಮಾರಿಸಿ ಪೊಲೀರಿಗೆ ಯುವತಿ ಕರೆ

ಕೋಲಾರ: ಸಿನಿಮಾ ಸ್ಟೈಲಿನಲ್ಲಿ ಪ್ರಿಯತಮೆಯನ್ನ ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇದೀಗ ತುಮಕೂರಿನಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಆದರೆ ಕಿಡ್ನಾಪ್ ಮಾಡಿದವರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಜನನಿಬಿಡ ರಸ್ತೆಯಲ್ಲಿ ಪ್ರಿಯತಮೆಯನ್ನು ಅಪಹರಿಸಿದ ಪ್ರಿಯಕರ

ಕೋಲಾರದ ಕಿಲಾರಿಪೇಟೆ ನಿವಾಸಿ ಶಿವ ಪ್ರೀತಿಸಿದ ಹುಡುಗಿಯನ್ನು ಕಿಡ್ನಾಪ್ ಮಾಡಿದ್ದ. ಈತ ಯುವತಿ ತನ್ನನ್ನು ಮದುವೆಯಾಗಲು ಒಪ್ಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇನ್ನೋವಾ ಕಾರಿನಲ್ಲಿ ಬಂದು ಗುರುವಾರ ಕಿಡ್ನಾಪ್ ಮಾಡಿಕೊಂಡು ಹೋಗಿದ್ದನು. ಈ ಸಂಬಂಧ ಕೋಲಾರದ ಗಲ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಜೊತೆಗೆ ಕೋಲಾರದ ಎಸ್‍ಪಿ ಕಾರ್ತಿಕ್ ರೆಡ್ಡಿ, ಕೋಲಾರ ನಗರ ಠಾಣೆ ಇನ್‍ಸ್ಪೆಕ್ಟರ್ ರಂಗಸ್ವಾಮಿ ಹಾಗೂ ಸಬ್ ಇನ್‍ಸ್ಪೆಕ್ಟರ್ ಅಣ್ಣಯ್ಯ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಕಿಡ್ನಾಪ್ ಆಗಿದ್ದ ಯುವತಿಯನ್ನು ಹುಡುಕುವಂತೆ ಸೂಚಿಸಿದ್ದರು. ಈ ವೇಳೆ ಕಿಡ್ನಾಪರ್ಸ್ ಬೆನ್ನು ಹತ್ತಿದ್ದ ಪೊಲೀಸರಿಗೆ ಕಿಡ್ನಾಪ್ ಆದ ಯುವತಿ ತುಮಕೂರಿನಲ್ಲಿರೋದಾಗಿ ತಿಳಿದು ಬಂದಿತ್ತು.

ಶಿವ ಕೋಲಾರದಿಂದ ಕಿಡ್ನಾಪ್ ಮಾಡಿಕೊಂಡು ತುಮಕೂರಿಗೆ ಕರೆದುಕೊಂಡು ಹೋಗಿದ್ದನು. ರಾತ್ರಿ ತುಮಕೂರು ನಗರದ ಸಿಟ್ರಿಯಾ ಹೋಟೆಲ್‍ನಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಕಿಡ್ನಾಪರ್ಸ್ ಗೆ ಯಾಮಾರಿಸಿ ಬೇರೆಯವರ ಮೊಬೈಲ್ ಮೂಲಕ ತುಮಕೂರು ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಳು. ಈ ವಿಷಯ ತಿಳಿದ ಕಿಡ್ನಾಪರ್ಸ್ ಬೆಳಗ್ಗೆ 8 ಗಂಟೆಗೆ ಹುಡುಗಿಯ ಸಮೇತ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದರು ಎಂದು ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.

ಈ ವೇಳೆ ತುಮಕೂರಿನ ಹೈವೆ ಪೊಲೀಸರು ಕಿಡ್ನಾಪರ್ಸ್ ಗ್ಯಾಂಗನ್ನ ಬೆನ್ನಟ್ಟಿದ್ದರು. ಈ ವೇಳೆ ಕಾರು ಮತ್ತು ಯುವತಿಯನ್ನು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಆಗ ತುಮಕೂರು ಪೊಲೀಸರ ಸಹಾಯದಿಂದ ಡ್ರೋನ್ ಕ್ಯಾಮೆರಾದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಕಾರ್ಯಾಚರಣೆ ಯಶಸ್ವಿಯಾಗಿಲ್ಲ. ಸದ್ಯ ಹುಡುಗಿ ಹಾಗೂ ಕಾರನ್ನ ವಶಕ್ಕೆ ಪಡೆದಿರುವ ಕೋಲಾರ ಪೊಲೀಸರು ಯುವತಿಯನ್ನು ಅವರ ಪೋಷಕರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಕಿಡ್ನಾಪ್ ಮಾಡಿದವರನ್ನು ಹಿಡಿಯಲು ಎರಡು ತಂಡ ರಚನೆ ಮಾಡಿರುವ ಎಸ್‍ಪಿ ಕಾರ್ತಿಕ್ ರೆಡ್ಡಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಏನಿದು ಪ್ರಕರಣ?
ಶಿವ ಕೋಲಾರದ ದೇವಾಂಗಪೇಟೆಯ ಯುವತಿಯನ್ನು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದನು. ಈ ನಡುವೆ ಶಿವ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಬೇಕೆಂದು ಹುಡುಗಿಯ ಮನೆಗೆ ಹೋಗಿ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಮನೆಯವರು ಒಪ್ಪಿರಲಿಲ್ಲ. ಜೊತೆಗೆ ಹುಡುಗಿಯೂ ಒಪ್ಪಲಿಲ್ಲ. ಸ್ನೇಹಿತನೊಬ್ಬನ ಕಾರಿನಲ್ಲಿ ಬಂದು ತಾನು ಪ್ರೀತಿಸಿದ ಹುಡುಗಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದನು. ಕಿಡ್ನಾಪ್ ವಿಡಿಯೋ ಎಲ್ಲೆ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಆ ವಿಡಿಯೋ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *