ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

– ತಲಾ 5 ಸಾವಿರ ನೀಡುವುದಾಗಿ ಘೋಷಿಸಿದ ರಾಕಿ ಭಾಯ್

ಬೆಂಗಳೂರು: ಕೊರೊನಾ 2ನೇ ಅಲೆ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಭಾರೀ ನಷ್ಟವಾಗಿದ್ದು, ಬಡ ಕಲಾವಿದರು, ಕಾರ್ಮಿಕರು ತುತ್ತು ಅನ್ನಕ್ಕೂ ಗತಿ ಪರಿತಪಿಸುತ್ತಿದ್ದಾರೆ. ಅದೇ ರೀತಿ ಹಲವು ಕಲಾವಿದರು ಸಹಾಯವನ್ನು ಸಹ ಮಾಡುತ್ತಿದ್ದಾರೆ. ಇದೀಗ ನಟ ಯಶ್ ಸಹ ಇನ್ನೂ ಒಂದು ಹೆಜ್ಜೆ ಮುಂದೆ ಬಂದು ಬಡ ಕಲಾವಿದರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಟ್ವಿಟ್ಟರ್ ಮೂಲಕ ಪತ್ರವನ್ನು ಬಿಡುಗಡೆಗೊಳಿಸಿರುವ ಯಶ್, ಸುಮಾರು 3 ಸಾವಿರಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ತಮ್ಮ ಸಂಪಾದನೆಯಿಂದ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಪತ್ರ ಬಿಡುಗಡೆ ಮಾಡಿರುವ ಅವರು, ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಡಿಮೆ ಬುಡಮೇಲು ಮಾಡಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ ಎಂದಿದ್ದಾರೆ.

ಸುಮಾರು 3 ಸಾವಿರಕ್ಕೂ ಹೆಚ್ಚಿನ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ.ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *