ಸಿದ್ದರಾಮಯ್ಯ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ: ದೇವೇಗೌಡ

ಹಾಸನ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ .ದೇವೇಗೌಡ ಸೂಕ್ಷ್ಮವಾಗಿ ತಿವಿದರು.

ನಗರದ ಸಂಸದರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬಗ್ಗೆ ಟೀಕೆ ಮಾಡಿದ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯನವರು ತುಂಬಾ ದೊಡ್ಡವರಿದ್ದಾರೆ ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಅವರ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ. ಏನು ಬೇಕಾದರೂ ಮಾತನಾಡುವ ಸ್ವಾತಂತ್ರ್ಯ ಅವರಿಗಿದೆ. ನಾನು ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಈ ಬಗ್ಗೆ ಜನ ತೀರ್ಪು ಕೊಡುತ್ತಾರೆ ಎಂದು ಹೇಳಿದರು.

ಸದ್ಯದ ಆರೋಗ್ಯ ಪರಿಸ್ಥಿತಿಯಲ್ಲಿ ನಾನು ಎಲ್ಲೂ ಓಡಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಯಾವ ಸಭೆಯನ್ನೂ ಕರೆದಿಲ್ಲ. ಕುಮಾರಸ್ವಾಮಿ ಹಾಗೂ ಬಂಡೆಪ್ಪ ಕಾಶೆಂಪೂರ್ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಅದರ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಕಾರ್ತಿಕಮಾಸದಲ್ಲಿ ನಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸುತ್ತೇನೆ ಕೊರೊನಾ ಕಾರಣದಿಂದ ಶ್ರಾವಣಮಾಸ ಮಾಡಲು ಸಾಧ್ಯವಾಗಲಿಲ್ಲ. ಕಾರ್ತಿಕ ಮಾಸದ ಅಂತ್ಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದೇನೆ. ಆರೋಗ್ಯ ಸುಧಾರಣೆ ಆಗುವವರೆಗೂ ರಾಜಕೀಯವಾಗಿ ಓಡಾಡುವುದಿಲ್ಲ. ಸದ್ಯ ಆಯುರ್ವೇದ ಚಿಕಿತ್ಸೆಗೆ ಒಳಗಾಗಿದ್ದೇನೆ. ಚಿಕಿತ್ಸೆಯ ನಂತರ ರಾಜಕೀಯ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದರು.

Comments

Leave a Reply

Your email address will not be published. Required fields are marked *