ಸಿದ್ದರಾಮಯ್ಯ, ಡಿಕೆಶಿ ನಡುವೆ ಹೊಂದಾಣಿಕೆ ಇದ್ಯಾ- ಸೋಮಶೇಖರ್ ಪ್ರಶ್ನೆ

ಹಾವೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಹೊಂದಾಣಿಕೆ ಇದೆಯಾ? ನೂರಕ್ಕೆ ನೂರರಷ್ಟು ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಹೊಂದಾಣಿಕೆ ಇಲ್ಲ ಎಂಬ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ನಮ್ಮಲ್ಲಿ ಎಲ್ಲ ಮಂತ್ರಿಗಳ ನಡುವೆ ಹೊಂದಾಣಿಕೆ ಇದೆ. ಬಿಜೆಪಿ ಸರ್ಕಾರ ಎಲ್ಲ ಮಂತ್ರಿಗಳು ಒಂದಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ ಎಂದರು.

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಕೊರೊನಾ ವಿಚಾರದಲ್ಲಿ ನಾವು ಖರ್ಚು ಮಾಡಿರುವ ಹಣಕ್ಕೂ, ಅವರ ಅವ್ಯವಹಾರ ಆಗಿದೆ ಅಂತಿರುವ ಹಣಕ್ಕೂ ವ್ಯತ್ಯಾಸವಿದೆ. ಖರ್ಚು ಮಾಡಿರುವ ಹಣವೇ ಕಡಿಮೆ. ಹೀಗಿರುವಾಗ ಹೆಚ್ಚಿನ ಹಣದ ಅವ್ಯವಹಾರ ಆಗಿದೆ ಅಂದರೆ ಹೇಗೆ? ಸಿದ್ದರಾಮಯ್ಯ ಪ್ರಚಾರಕ್ಕಾಗಿ ಲೆಕ್ಕಕೊಡಿ, ಲೆಕ್ಕಕೊಡಿ ಅಂತಿದ್ದಾರೆ. ಲೆಕ್ಕ ಕೊಡಲು ನಾವು ಸಿದ್ಧರಿದ್ದರೂ ಲೆಕ್ಕ ತೆಗೆದುಕೊಳ್ಳಲು ಸಿದ್ದರಾಮಯ್ಯ ಸಿದ್ಧರಿಲ್ಲ ಎಂದು ತಿರುಗೇಟು ನೀಡಿದರು.

ಮಂತ್ರಿ ಮಾಡುವುದು, ಮಂತ್ರಿ ಮಂಡಲದಿಂದ ತೆಗೆಯುವುದು ಸಿಎಂ ಅವರ ಪರಮಾಧಿಕಾರ. ಈಗ ನಾವು ರಾಜೀನಾಮೆ ಕೊಡುವ ಪ್ರಮೇಯ ಬರುವುದಿಲ್ಲ. ರಾಜೀನಾಮೆ ಕೊಟ್ಟ ಕೆಲವರಿಗೆ ಎಂಎಲ್‍ಸಿ ಮಾಡಿದ್ದಾರೆ. ಸಿಎಂ ಯಾರಿಗೆ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡರು.

Comments

Leave a Reply

Your email address will not be published. Required fields are marked *