ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಹೇಳಿಕೆ ನೀಡ್ತಿದ್ದಾರೆ: ಸವದಿ

ಕೊಪ್ಪಳ: ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲು ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ಧರ್ಮದ ಮೇಲಿನ ಅನ್ಯಾಯ ನಿಲ್ಲಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದವರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವ ಉದ್ದೇಶದಿಂದ ಲವ್ ಜಿಹಾದ್ ವಿರುದ್ಧ ಕಾನೂನು ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ವಿರುದ್ಧ ಎಚ್.ವಿಶ್ವನಾಥ್ ಗರಂ ಆಗಿರುವ ಕುರಿತು ಪ್ರತಿಕ್ರಿಯಿಸಿ, ನ್ಯಾಯಾಲಯದ ಬಗ್ಗೆ ನಾವ್ಯಾರೂ ಟೀಕೆ ಮಾಡಲ್ಲ. ತೀರ್ಪನ್ನು  ಗೌರವಿಸಬೇಕು. ಹೈಕೋರ್ಟ್ ನಲ್ಲಿ ಅವರ ವಿರುದ್ಧ ತೀರ್ಪು ಬಂದಿದ್ದು, ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಪಡೆಯಲು ನಾವೆಲ್ಲ ಪ್ರಯತ್ನ ಮಾಡುತ್ತೇವೆ ಎಂದರು.

ಯೋಗೇಶ್ವರ್ ಪರ ರಮೇಶ್ ಜಾರಕಿಹೊಳಿ ಲಾಭಿ ಮಾಡುತ್ತಿರುವುದು ಅವರ ವೈಯಕ್ತಿಕ ಗೆಳೆತನದ ವಿಚಾರ. ಹೀಗಾಗಿ ಇಂತಹ ಬೆಳವಣಿಗೆ ಆಗುತ್ತದೆ, ಅದು ತಪ್ಪಲ್ಲ. ಕೆಲವರು ಬೇಡಿಕೆ ಇಡುತ್ತಾರೆ. ತೀರ್ಮಾನಿಸುವುದು ಮುಖ್ಯಮಂತ್ರಿ, ಹೈಕಮಾಂಡ್ ಗೆ ಬಿಟ್ಟ ವಿಚಾರ. ಸೋತವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವೇಳೆ ಯಾರನ್ನ ಮಂತ್ರಿ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಇದರಲ್ಲಿ ಯಾರೂ ವಿರೋಧ ಮಾಡುವ ಪ್ರಶ್ನೆ ಇಲ್ಲ, ಬಿಜೆಪಿ ಒಂದು ಕುಟುಂಬ ಇದ್ದಂತೆ. ನಮ್ಮಲ್ಲಿ ಹೊರಗಿವರು ಒಳಗಿನವರು ಎಂಬ ವಿಭಜನೆಯಿಲ್ಲ, ನಾವೆಲ್ಲ ಒಂದೇ, ವಿಭಜನೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ವಿಭಾಗದ ಬಸ್ ಸಂಚಾರವನ್ನೂ ನಿಲ್ಲಿಸಲಾಗುವುದಿಲ್ಲ. ಎಲ್ಲ ನಾಲ್ಕು ವಿಭಾಗದ ಬಸ್ ಸಂಚಾರ ಇರುತ್ತದೆ ಯಾರಾದರು ಬಸ್ ಗಳಿಗೆ ಹಾನಿಯುಂಟು ಮಾಡಿದರೆ ಅವರಿಂದಲೇ ನಷ್ಟ ಭರಿಸಿಕೊಳ್ಳಲಾಗುವುದು. ಯಾರೂ ಕೂಡ ಸರ್ಕಾರದ ಆಸ್ತಿಗಳಿಗೆ ಹಾನಿ ಮಾಡಬಾರದು ಎಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *