ಸಿದ್ದರಾಮಯ್ಯರಿಗೆ ಕಾಂಗ್ರೆಸ್ಸಿನಲ್ಲಿ ಕಳೆದುಹೋಗುವ ಭಯವಿದೆ: ನಳಿನ್

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕಾಂಗ್ರೆಸ್ಸಿನಲ್ಲಿ ಕಳೆದುಹೋಗುವ ಭಯವಿದೆ. ಕಾಂಗ್ರೆಸ್ಸಿನಲ್ಲಿ ಅವರ ನಾಯಕತ್ವಕ್ಕೆ ಬೆಲೆಯಿಲ್ಲ ಅನ್ನಿಸಿದೆ. ಹೀಗಾಗಿ ಮೂಲೆ ಗುಂಪಾಗುವ ಭಯವಿದೆ. ಅದಕ್ಕೋಸ್ಕರ ಸಿಎಂ ಮೇಲೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನಲ್ಲಿ 10 ಜಿಲ್ಲೆಗಳ ಮೂರು ವಿಭಾಗದ ತರಬೇತಿ ಶಿಬಿರ ನಡೆಯುತ್ತಿದೆ. ಶಿರಾ ಹಾಗೂ ಆರ್‍ಆರ್‍ನಗರ, ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳು ಬಿಜೆಪಿ ಗೆಲುವಾಗಲಿದೆ. ಶಿರಾದಲ್ಲಿ 25 ಸಾವಿರ, ಆರ್ ಆರ್ ನಗರದಲ್ಲಿ 40 ಸಾವಿರ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ನಮ್ಮ ಗೆಲುವು ನಿಶ್ಚಯ. ಶಿರಾದಲ್ಲಿ ವಿಜಯೇಂದ್ರ, ಸುರೇಶ್ ಗೌಡ, ರವಿಕುಮಾರ್, ಎಸ್ ಅರ್ ಗೌಡ, ಬಿಕೆ ಮಂಜುನಾಥ್ ಇವರ ಸಾಮೂಹಿಕ ಹೋರಾಟದಲ್ಲಿ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್ ಆರ್ ನಗರದಲ್ಲಿ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ಸಾಮೂಹಿಕ ಪ್ರಯತ್ನದಿಂದ ಗೆಲುವಾಗಲಿದೆ. ಸಿಎಂ ಈ ಭಾಗದಲ್ಲಿ ಪ್ರಚಾರ ನಡೆಸಿರೋದು ಸಾಕಷ್ಟು ಪ್ರಭಾವ ಬೀರಿದೆ. ಕಾಂಗ್ರೆಸ್ಸಿನ ಒಳಜಗಳ ಬಿಜೆಪಿ ಗೆಲುವಿಗೂ ಕಾರಣ. ಆರ್‍ಆರ್ ನಗರವನ್ನ ಡಿಕೆ ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾವನ್ನ ಸಿದ್ದರಾಮಯ್ಯ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಡಿಕೆ ಶಿವಕುಮಾರ್ ತಲೆಬಿಸಿ ಮಾಡಿಕೊಂಡಿದ್ದರು. ಆರ್‍ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಸಿದ್ದರಾಮಯ್ಯ ತಲೆಬಿಸಿ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಶಿರಾದಲ್ಲಿ ಕಾಂಗ್ರೆಸ್ ಗೆಲುವುದನ್ನ ಯೋಚನೆ ಮಾಡೋದು ಬದಲು ಆರ್‍ಆರ್ ನಗರವನ್ನ ಸೋಲಿಸೋದು ಹೇಗೆ ಅಂತ ತಲೆಕೆಡಿಸಿಕೊಂಡಿದ್ದರು. ಕಾಂಗ್ರೆಸ್ಸಿನ ಆಂತರಿಕ ಜಗಳ ಈಗ ಬೀದಿಜಗಳವಾಗಿದೆ ಎಂದರು.

ಈ ಚುನಾವಣೆ ಬಳಿಕ ಕಾಂಗ್ರೆಸ್ ಜಗಳ ಬೀದಿ ಕಾಳಗವಾಗಲಿದೆ. ಕಾಂಗ್ರೆಸ್ಸಿನವರಿಗೆ ಯಾವಾಗ ಸೋಲಾಗುತ್ತೋ ಆಗ ಇವಿಎಂ ಮೇಲೆ ಅನುಮಾನ ಪಡ್ತಾರೆ. ಗೆದ್ದಾಗ ಇವಿಎಂ ಸರಿ ಇರಲ್ವಾ..? ಇದರಿಂದ ಕಾಂಗ್ರೆಸ್ಸಿನವರಿಗೆ ನಾವು ಸೋಲ್ತೀವಿ ಅಂತ ಅರ್ಥವಾಗಿದೆ. ಎಲ್ಲಲ್ಲಿ ಸೋತಿಲ್ಲವೂ ಅಲ್ಲಿ ಗುಂಡಾಗಿರಿ ಮಾಡಿದ್ರಾ ಎಂದು ಪ್ರಶ್ನಿಸಿದ ನಳಿನ್, ಇವಿಎಂ ದೋಷವಿದ್ದರೆ ಡಿಕೆಶಿ, ಸಿದ್ದರಾಮಯ್ಯ ಗೆಲ್ಲುವುದಕ್ಕೆ ನಾವು ಬಿಡ್ತಿದ್ವಾ ಎಂದು ಹೇಳಿದರು.

Comments

Leave a Reply

Your email address will not be published. Required fields are marked *