ಸಿಡಿ ಹಿಂದೆ ಬಿಜೆಪಿ, ಕಾಂಗ್ರೆಸ್‌ ನಾಯಕರ ಕೈವಾಡ – ಇಬ್ಬರ ಬಗ್ಗೆ ಯತ್ನಾಳ್‌ ಬಾಂಬ್‌

– ರಾಜ್ಯದಲ್ಲಿರುವುದು ಬಿಜೆಪಿ, ಕಾಂಗ್ರೆಸ್‌ ಸರ್ಕಾರ
– 23 ಜನರಿಗೆ ಸಿಡಿ ಭಯ

ಬೆಂಗಳೂರು: ಸಿಡಿ ಹಿಂದೆ ಎರಡು ಪಕ್ಷದ ಇಬ್ಬರು ನಾಯಕರಿದ್ದಾರೆ‌. ಒಬ್ಬರು ಕಾಂಗ್ರೆಸ್ಸಿನವರು, ಇನ್ನೊಬ್ಬರು ಬಿಜೆಪಿಯವರು. ಇಬ್ಬರು ಸಮ್ಮಿಶ್ರವಾಗಿ ಮಾಡುತ್ತಿದ್ದಾರೆ. ಈ ಸರ್ಕಾರವೂ ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರ್ಕಾರ ಎಂದು ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಸಂತ್ರಸ್ತರು ಯಾರೂ ಇಲ್ಲ ಸಂತ್ರಸ್ತೆ ಅಂತ ಇದ್ದರೆ ಅದು ದೆಹಲಿಯ ನಿರ್ಭಯ ಪ್ರಕರಣದ ಯುವತಿ ಮಾತ್ರ‌. ಇವರು ಹಲ್ಲು ಕಿಸಿದು ಮಾತನಾಡುತ್ತಾರೆ. ಸಿಡಿಯಲ್ಲಿ ಇರುವ ಇಬ್ಬರು ಸುಕ ಪುರುಷರೇ ಎಂದಿದ್ದಾರೆ.

23 ಜನರಿಗೆ ಸಿಡಿ ಭಯ ಇದೆ. ಇದನ್ನು ಸಿಬಿಐಗೆ ವಹಿಸಬೇಕು. ಯಾರ್ಯಾರು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಅವರ ತಂಡ ಯಾವುದು ಎಲ್ಲವೂ ಗೊತ್ತಾಗಬೇಕು ಎಂದು ಯತ್ನಾಳ್‌ ಆಗ್ರಹಿಸಿದರು.

ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಜಮೀರ್, ಕೆಜೆ ಜಾರ್ಜ್, ಲಕ್ಷ್ಮಿ ಹೆಬ್ಬಾಳ್ಕರ್‌ ಮೇಲೆ ಇರುವ ಪ್ರೀತಿ ಬಿಜೆಪಿ ಶಾಸಕರ ಮೇಲೆ‌ ಇದ್ದರೆ ಸಾಕಿತ್ತು. ನಾವು ಅನುದಾನ ಕೇಳಿದರೆ ವಿಷ ಕುಡಿಯಲು ಕಾಸಿಲ್ಲ ಎನ್ನುತ್ತಾರೆ. ಜಿಎಸ್‌ಟಿ ಹಣವನ್ನು ಕೇಂದ್ರದ ಮುಂದೆ ಕೇಳಲ್ಲ. ಅವರು ಕೊಟ್ಟಿಲ್ಲ ಅಂತ ಇಲ್ಲಿ‌ ಶಾಸಕರ ಮುಂದೆ ಗೊಣಗುತ್ತಾರೆ. ಇವರಿಗೆ ಹೋಗಿ ಕೇಳುವ ಧೈರ್ಯ ಇಲ್ಲ. ಕೇಂದ್ರದಲ್ಲಿ ಇವರನ್ನು ಕ್ಯಾರೇ ಮಾಡಲ್ಲ. ಯಡಿಯೂರಪ್ಪ ಅವರ ಈ ನಡೆಗೆ ಏನು ಉತ್ತರ ಕೊಡಬೇಕೋ ಸಮುದಾಯ ಕೊಡುತ್ತದೆ ಎಂದರು.

ಮುಂದಿನ ಚುನಾವಣೆಯಲ್ಲಿ ಯಾರಿಗೆ ಏನು ತೋರಿಸಬೇಕು ಅದನ್ನು ತೋರಿಸುತ್ತೇವೆ. ಯಡಿಯೂರಪ್ಪ ಹಿಂದುತ್ವದ ಸರ್ಕಾರ ಅಂತ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಉತ್ತರಾಖಂಡ ಆಯ್ತು ಮುಂದಿನ ಸರದಿ‌ ನನ್ನ ಬದಲಾವಣೆ ಎನ್ನುವ ಭಯ ಸಿಎಂಗೆ ಆರಂಭವಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *