ಸಿಡಿ ಯುವತಿ ಹಾಜರ್‌, ಜಾರಕಿಹೊಳಿಗೆ ಸಂಕಷ್ಟ – ಎಫ್‌ಐಆರ್‌ ರದ್ದತಿಗೆ ಸಲ್ಲಿಸುತ್ತಾರಾ ಅರ್ಜಿ?

ಬೆಂಗಳೂರು: ಇಲ್ಲಿಯವರೆಗೆ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಸಿಡಿ ಲೇಡಿ ನ್ಯಾಯಾಧೀಶರು ಮತ್ತು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ ಬಳಿಕ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ.

ಸಾಧಾರಣವಾಗಿ ಯಾವುದೇ ದೊಡ್ಡ ವ್ಯಕ್ತಿಗಳು ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಆ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್‌ನಲ್ಲೂ ತಮ್ಮ ಪರವಾಗಿ ಆದೇಶ ಬಾರದೇ ಇದರೆ ಸುಪ್ರೀಂ ಮೊರೆ ಹೋಗುತ್ತಾರೆ. ಈ ಅರ್ಜಿಯ ವಿಚಾರಣೆ ಸಮಯದಲ್ಲೇ ಸ್ವಲ್ಪ ಸಮಯ ಹೋಗುತ್ತದೆ. ಆದರೆ ಈ ಪ್ರಕರಣದಲ್ಲಿ ಜಾರಕಿಹೊಳಿ ಎಫ್‌ಐಆರ್‌ ರದ್ಧತಿಗೆ ಇನ್ನೂ  ಅರ್ಜಿ ಸಲ್ಲಿಸಿಲ್ಲ.

ನಿರೀಕ್ಷಣಾ ಜಾಮೀನು ಬೇಡ ಎನ್ನುತ್ತಿರುವ ರಮೇಶ್‌ ಜಾರಕಿಹೊಳಿ ಯುವತಿ ಹೇಳಿಕೆ ನೀಡಿಲ್ಲ ಎಂದು ಸುಮ್ಮನಿದ್ದರು. ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರ ಜೊತೆ `ಸರ್ಕಾರವನ್ನೇ ಬೀಳಿಸಿದ್ದೇನೆ ಇದು ಯಾವ ಮಹಾ’ ಎಂಬ ಮಾತಿನಿಂದ ಮತ್ತೊಂದು ಸಂಕಷ್ಟ ಬಂದಿದೆ.

ಈ ಹಿಂದೆ ತಮ್ಮ ಹೇಳಿಕೆಯಲ್ಲಿ ನಾವೇ ಖಾಸಗಿ ಸಂಸ್ಥೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಹೇಳಿದ್ದರು. ಆದರೆ ಸಂಸ್ಥೆ ಕೊನೆಯವರೆಗೂ ಯುವತಿ ಎಲ್ಲಿದ್ದಾರೆ ಮತ್ತು ಈಕೆಯ ಜೊತೆ ಇದ್ದವರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಪತ್ತೆ ಹಚ್ಚಲು ವಿಫಲವಾಗಿತ್ತು.

ಯುವತಿ ಕಾನೂನು ಹೋರಾಟ ಮಾಡುತ್ತಿದ್ದರೂ ಜಾರಕಿಹೊಳಿ ತಂಡ ಅದಕ್ಕೆ ಪ್ರತಿಯಾಗಿ ಯಾವುದೇ ಕಾನೂನು ಮಾಡದೇ ಸುಮ್ಮನಿದ್ದರು. ಈ ಬಗ್ಗೆ ಪ್ರಶ್ನೆ ಕೇಳಿದಾಗ ನನ್ನ ಬಳಿ 11 ಪ್ರಮುಖ ಸಾಕ್ಷ್ಯಗಳು ಇವೆ. ಅದನ್ನು ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದ್ದರು.

ರಮೇಶ್‌ ಜಾರಕಿಹೊಳಿ ಪರವಾಗಿ ಈಗಾಗಲೇ ಸಹೋದರ ಬಾಲಚಂದ್ರ ಜಾರಕಿಹೊಳಿ ಹಿರಿಯ ವಕೀಲರನ್ನು ಸಂಪರ್ಕಿಸಿದ್ದಾರೆ. ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟರೆ ರಮೇಶ್‌ ಜಾರಕಿಹೊಳಿಗೆ ಸಂಕಷ್ಟ ಗ್ಯಾರಂಟಿ. ಆಕೆಯ ಹೇಳಿಕೆ ವಿಡಿಯೋ ಹೇಳಿಕೆಗೆ ತದ್ವಿರುದ್ಧವಾಗಿ ಇದ್ದರೆ ಮಾತ್ರ ಈ ಪ್ರಕರಣದಲ್ಲಿ ಪಾರು. ಇಲ್ಲದಿದ್ದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಆಗಲಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ.

ಮುಂದಿನ ನಡೆ ಏನು?
ಈಗಾಗಲೇ ಜಾರಕಿಹೊಳಿ ಬಹಿರಂಗವಾಗಿಯೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಯುವತಿಯ ಹೇಳಿಕೆ ಆಧಾರದ ಮೇಲೆ ಜಾರಕಿಹೊಳಿಯನ್ನು ಬಂಧನ ಮಾಡುವ ಸಾಧ್ಯತೆಯಿದೆ. ಆದರೆ ಈಗ ಯುವತಿ ಹೇಳಿಕೆ ನೀಡಿದ ಬಳಿಕ ಮುಂದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಬಳಿಕ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದು ಮಾಡುವ ಬಗ್ಗೆಯೂ ಅರ್ಜಿ ಸಲ್ಲಿಸಬಹುದು.

Comments

Leave a Reply

Your email address will not be published. Required fields are marked *