ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬಜೆಟ್ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಿಡಿ ವಿಚಾರವನ್ನಿ ಸಿಎಂ ಪ್ರಸ್ತಾಪ ಮಾಡಿದರು. ವಿಪಕ್ಷದವರು ಯಾವ ತನಿಖೆಗೆ ಹೇಳಿದರೂ ತನಿಖೆ ಮಾಡಿಸಲು ಸಿದ್ಧ ಎಂದು ತಿಳಿಸಿದರು.

ಸಿಡಿ ಬಗ್ಗೆ ತನಿಖೆ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಆಗ ಅವರು ಏನು ಸಲಹೆ ಕೊಡ್ತಾರೆ ಅದರ ಆಧಾರದ ಮೇಲೆ ತನಿಖೆ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.

ಮಾಜಿ ಸಚಿವ ರಾಸಲೀಲೆ ಸಿಡಿ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಆದರೆ ಈ ಮಧ್ಯೆ ಸಂತ್ರಸ್ತ ಯುವತಿ ಪೊಲೀಸರ ಮುಂದೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ಪ್ರಕರಣ ಸಂಬಂಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯುವುದಾಗಿ ತಿಳಿಸಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ದಿನೇಶ್ ಆರೋಪಿಸಿದ್ದರು. ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ಬರೆದ ಪತ್ರ ಸಹ ಪಬ್ಲಿಕ್ ಟಿವಿಗೆ ಕೂಡ ಲಭ್ಯವಾಗಿತ್ತು. ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರಹಾಕಿದ್ದರು.

Comments

Leave a Reply

Your email address will not be published. Required fields are marked *