ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಒಪ್ಪಿಸಲಾಗಿದ್ದು, ಇದು ತಿಪ್ಪೆ ಸಾರಿಸುವ ಕೆಲಸ ಅಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‍ಐಟಿಗೆ ತನಿಖೆ ಜವಾಬ್ದಾರಿ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ಇದು ತಿಪ್ಪೆ ಸಾರಿಸುವ ಕೆಲಸ ಅಷ್ಟೇ. ಇದರಿಂದ ಯಾವುದೇ ಪ್ರಯೋಜನವಿಲ್ಲ. ತನಿಖಾ ವರದಿಯಲ್ಲಿ ಯಾರು ಇದುವರೆಗೂ ಜೈಲಿಗೆ ಹೋಗಿಲ್ಲ ಎಂದರು.

ರಾಜಕಾರಣದಲ್ಲಿ ನೇರವಾಗಿ ಯುದ್ಧ ಮಾಡೋಣ. ಪ್ರತಿ ದಿನ ಜನರ ಮುಂದೆ ಬರುವವರು, ಜನರಿಗೆ ಏನು ಸಂದೇಶ ಕೊಡುತ್ತೀರಾ ಎಂದು ಮಾಜಿ ಸಿಎಂ ಗರಂ ಆದರು.
ರಮೇಶ್ ಜಾರಕಿಹೊಳಿ ಸಿ.ಡಿ. ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು, ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಈ ವಿಶೇಷ ತನಿಖಾ ತಂಡವನ್ನು ರಚಿಸಿ ಅದರ ನೇತೃತ್ವವನ್ನು ಸೌಮೇಂದು ಮುಖರ್ಜಿ ಅವರಿಗೆ ನೀಡಲಾಗಿದೆ. ಎಸ್‍ಐಟಿ ತಂಡ ವಿಚಾರಣೆ ನಡೆಸಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಸೂಚಿಸಿದ್ದಾರೆ.

ಬೊಮ್ಮಾಯಿ ಪತ್ರದಲ್ಲೇನಿತ್ತು..?
ದಿನಾಂಕ 9-3-2021 ರಂದು ಮಾಜಿ ಮಂತ್ರಿಗಳಾದ ಶ್ರೀ ರಮೇಶ್ ಲ ಜಾರಕಿಹೊಳಿರವರು ನನಗೆ ಪತ್ರ ಬರೆದು, ಅವರ ವಿರುದ್ಧ ದಿನಾಂಕ 2-3-2021ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಅರ್ಜಿ ನೀಡಿದ್ದು, ಅದರಲ್ಲಿ ಅವರ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವಂಥದ್ದು ಬಹಳ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಈ ಷಡ್ಯಂತ್ರವನ್ನು ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕುಶವಾಗಿ ವಿಚಾರಣೆಯನ್ನು ಮಾಡಲು ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಹಾಗೂ ಅದರ ನೇತೃತ್ವವನ್ನು ಶ್ರೀ ಸೌಮೇಂದು ಮುಖರ್ಜಿ, ಐಜಿಪಿ ಇವರಿಗೆ ವಹಿಸುವುದು ಮತ್ತು ಈ ಬಗ್ಗೆ ಸಂಪೂರ್ಣ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ನೀಡುವಂತೆ ಸೂಚಿಸಿದೆ.

Leave a Reply