ಸಿಡಿ ಕೇಸ್‌ – 18 ಲಕ್ಷ ಮೌಲ್ಯದ ಚಿನ್ನ ಖರೀದಿಸಿದ್ರಾ ನರೇಶ್‌ ಗೌಡ?

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಚುರುಕುಗೊಂಡಿದ್ದು ಮಾಜಿ ಪತ್ರಕರ್ತ ನರೇಶ್‌ ಗೌಡ ಮನೆಯಲ್ಲಿ 18 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿ ರಶೀದಿ ಪತ್ತೆಯಾಗಿದೆ.

ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ ನರೇಶ್‌ ಗೌಡನ ಮನೆಯ ಮೇಲೆ ಬುಧವಾರ ಎಸ್‌ಐಟಿ ದಾಳಿ ನಡೆಸಿತ್ತು. ಈ ವೇಳೆ ಲ್ಯಾಪ್‍ಟಾಪ್‌ ಮತ್ತು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿ ಸ್ಲಿಪ್‍ಗಳು ಪತ್ತೆಯಾಗಿದೆ.

ಯುವತಿ ತಂಗಿದ್ದ ಆರ್‌ಟಿ ನಗರದ ಮನೆಯಲ್ಲೂ 23 ಲಕ್ಷ ರೂ. ಹಣ ಸಿಕ್ಕಿದೆ. ಈಗ ಎಸ್‌ಐಟಿ ಪೊಲೀಸರು ಯುವತಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಇದರ ಮೂಲ ಯಾವುದು ಎಂಬುದರ ಬಗ್ಗೆ ತನಿಖೆಗೆ ಇಳಿದಿದೆ.

ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನರೇಶ್‌ ಗೌಡ ಮತ್ತು ವಿಜಯಪುರ ದೇವನಹಳ್ಳಿಯ ಮೂಲದ ಹ್ಯಾಕಿಂಗ್‌ ತಜ್ಞ ಶ್ರವಣ್‌ ನಾಪತ್ತೆಯಾಗಿದ್ದು ಇವರ ಪತ್ತೆ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಇದನ್ನೂ ಓದಿ: ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

ಬುಧವಾರ ನರೇಶ್‌ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಒಟ್ಟಿಗೆ ಇರುವ ಫೋಟೋವನ್ನು ಬಿಜೆಪಿ ಟ್ವೀಟ್‌ ಮಾಡಿತ್ತು. ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ʼಮಾಸ್ಟರ್‌ ಮೈಂಡ್ʼ‌ ಮತ್ತು ʼರಿಂಗ್‌ ಮಾಸ್ಟರ್ʼ‌ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿತ್ತು.

ಬಿಜೆಪಿ ಕರ್ನಾಟಕ ಸರಣಿ ಟ್ವೀಟ್‌ ಮಾಡುವ ಮೂಲಕ ಡಿಕೆ ಶಿವಕುಮಾರ್‌ ಅವರಿಗೆ ಟಾಂಗ್‌ ನೀಡುತ್ತಿದೆ. ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ಹೇಳಿದೆ.

Comments

Leave a Reply

Your email address will not be published. Required fields are marked *