ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

– ಕನ್ನಡಿಗರ ಕೆಚ್ಚೆದೆಯ ಆಟಕ್ಕೆ ಸ್ಮಿತ್ ಬೌಲಿಂಗ್ ಪಡೆ ಉಡೀಸ್

ಶಾರ್ಜಾ: ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಲ್ ರಾಹುಲ್ ಅವರ ಭರ್ಜರಿ ಶತಕದ ಜೊತೆಯಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 224 ರನ್‍ಗಳ ಟಾರ್ಗೆಟ್ ನೀಡಿದೆ.

ಮೊದಲ ವಿಕೆಟ್‍ಗೆ ಮಯಾಂಕ್ ಮತ್ತು ರಾಹುಲ್ ಅವರು 183 ರನ್‍ಗಳ ಆರಂಭಿಕ ಜೊತೆಯಾಟವಾಡಿದರು. ಇದರಲ್ಲಿ ಮಯಾಂಕ್ ಶತಕ ಸಿಡಿಸಿ ಮಿಂಚಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ರಾಹುಲ್ 69 ರನ್ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ಆರಂಭಿಕ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಯಿತು. 2019ರಲ್ಲಿ ಆರ್‌ಸಿಬಿ ವಿರುದ್ಧ 185 ರನ್ ಸಿಡಿಸಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಮೊದಲ ಸ್ಥಾನದಲ್ಲಿದ್ದರೆ, 2017ರಲ್ಲಿ 184 ರನ್‍ಗಳ ಜೊತೆಯಾಟವಾಡಿದ ಕೋಲ್ಕತ್ತಾದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲೀನ್ ಜೋಡಿ ಎರಡನೇ ಸ್ಥಾನದಲ್ಲಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಭರ್ಜರಿ ಓಪನಿಂಗ್ ನೀಡಿದ ಮಯಾಂಕ್ ಅಗರ್ವಾಲ್ ಮತ್ತು ನಾಯಕ ಕೆ.ಎಲ್ ರಾಹುಲ್ ಮೊದಲ ನಾಲ್ಕು ಓವರಿನಲ್ಲೇ 41 ರನ್ ಚಚ್ಚಿದರು. ಜೊತೆಗೆ ಕೇವಲ 28 ಎಸೆತಗಳಲ್ಲೇ ಅರ್ಧಶತಕದ ಜೊತೆಯಾಟವಾಡಿದರು. ಇದೇ ವೇಳೆ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಮಯಾಂಕ್ ಅಗರ್ವಾಲ್ ಕೇವಲ 26 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮಯಾಂಕ್ ಇನ್ನಿಂಗ್ಸ್‍ನಲ್ಲಿ 4 ಫೋರ್ ಮತ್ತು 6 ಭರ್ಜರಿ ಸಿಕ್ಸರ್ ಸಿಡಿಸಿದರು.

ರಾಹುಲ್ ಮತ್ತು ಮಯಾಂಕ್ ಅವರ ಸೂಪರ್ ಬ್ಯಾಟಿಂಗ್ ನಿಂದ ಕೇವಲ 8.4 ಓವರಿನಲ್ಲೇ ಪಂಜಾಬ್ ತಂಡ ನೂರರ ಗಡಿ ದಾಟಿತು. ಈ ಮೂಲಕ ಐಪಿಎಲ್-2020ಯಲ್ಲಿ ಆರಂಭಿಕ ಜೋಡಿಯಾಗಿ ಮೊದಲ ಶತಕದ ಜೊತೆಯಾಟವಾಡಿದರು. ಕ್ರೀಸಿಗೆ ಕಚ್ಚಿಕೊಂಡಂತೆ ಬ್ಯಾಟ್ ಬೀಸಿದ ಮಯಾಂಕ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ ಮಿಂಚಿದರು. ಇದಕ್ಕೆ ಉತ್ತಮ ಸಾಥ್ ಕೊಟ್ಟ ರಾಹುಲ್ 35 ಬಾಲಿಗೆ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ 17ನೇ ಅರ್ಧಶತಕವನ್ನು ದಾಖಲಿಸಿದರು.

ಆರಂಭದಿಂದ ಭರ್ಜರಿಯಾಗಿ ಆಡಿದ ಮಯಾಂಕ್ 7 ಭರ್ಜರಿ ಸಿಕ್ಸರ್ ಮತ್ತು 9 ಫೋರ್ ಗಳ ಸಹಾಯದಿಂದ 45 ಬಾಲಿಗೆ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮಯಾಂಕ್ ಅಗರ್ವಾಲ್ 50 ಎಸೆತಗಳಲ್ಲಿ 106 ರನ್ ಸಿಡಿಸಿ ಔಟ್ ಆದರು. ನಂತರ 54 ಎಸೆತಗಳಲ್ಲಿ 69 ರನ್ ಸಿಡಿಸಿದ್ದ ರಾಹುಲ್ ಅವರು ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕೊನೆಯಲ್ಲಿ ನಿಕೋಲಸ್ ಪೂರನ್ 8 ಎಸೆತಗಳಲ್ಲಿ ಮೂರು ಸಿಕ್ಸ್ ಒಂದು ಫೋರ್ ಮೂಲಕ 25 ರನ್ ಸಿಡಿಸಿ ಪಂಜಾಬ್ ತಂಡವನ್ನು 200ರ ಗಡಿ ದಾಟಿಸಿದರು.

Comments

Leave a Reply

Your email address will not be published. Required fields are marked *