ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರನ್ನು ನೇಮಕ ಮಾಡಲಿದೆ.

ಈ ಸಂಬಂಧ ರಾಜ್ಯ ಸರ್ಕಾರದದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಎನ್.ಆರ್.ಸಂತೋಷ್ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಳಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿನ ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದ ಬಿಜೆಪಿಯ ನಾಯಕರು, 16 ಅತೃಪ್ತ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದರು. ಬಳಿಕ ಅವರನ್ನು ಬಿಜೆಪಿ ಹೈಕಮಾಂಡ್ ಸಲಹೆಯಂತೆ ಎನ್.ಆರ್. ಸಂತೋಷ್ ರಾಜ್ಯದಿಂದ ಕರೆದುಕೊಂಡು ಹೋಗಿದ್ದರು. ಆಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರ ವಿರುದ್ಧ ಹರಿಹಾಯ್ದು ಹೇಳಿಕೆಯನ್ನೂ ಕೊಟ್ಟಿದ್ದರು.

ಕಷ್ಟಕಾಲದಲ್ಲಿ ನೆರವಾದ ಹಾಗೂ ತಾವು ಮತ್ತೆ ಮುಖ್ಯಮಂತ್ರಿಯಾಗಲು ಶ್ರಮಿಸಿದ ಎನ್.ಆರ್. ಸಂತೋಷ್ ಅವರಿಗೆ ಸಿಎಂ ಯಡಿಯೂರಪ್ಪ ಅವರು ಉಡುಗೊರೆ ನೀಡಿದ್ದಾರೆ. ಈಗಾಗಲೇ ಮೂವರು ಸಿಎಂ ಅವರಿಗೆ  ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇದೀಗ ಯಡಿಯೂರಪ್ಪ ಅವರಿಗೆ 4ನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರು ನೇಮಕವಾಗಿದ್ದಾರೆ.

ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ ಮತ್ತು ಶಂಕರ ಗೌಡ ಪಾಟೀಲ್ ಅವರು ನೇಮಕವಾಗಿದ್ದಾರೆ. ಅವರೊಂದಿಗೆ ಇದೀಗ ಎನ್. ಆರ್.ಸಂತೋಷ್ ಕೂಡ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂದಿದ್ದಾರೆ.

Comments

Leave a Reply

Your email address will not be published. Required fields are marked *