ಸಿಎಂ ಭೇಟಿ ಮಾಡಿದ ಕೃಷಿ ಕುಲಪತಿಗಳ ನಿಯೋಗ – ಮಾನವ ಸಂಪನ್ಮೂಲಗಳ ಕೊರತೆ ನೀಗಿಸುವಂತೆ ಮನವಿ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಕೊರತೆಯನ್ನು ತುಂಬುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲರ ನೇತೃತ್ವದಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.45 ರಷ್ಟು ಶಿಕ್ಷಕರ ಹುದ್ದೆಗಳು, ಶೇ.55 ರಷ್ಟು ಶಿಕ್ಷಕೇತರ ಹುದ್ದೆ ಕೊರತೆಯಿದೆ. ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಸಂಶೋಧನೆಗೆ 2016-17 ರಿಂದೀಚೆಗೆ ಶೇ.65 ರಷ್ಟು ಅನುದಾನ ಕಡಿತಗೊಂಡಿದೆ. ಗುಣಮಟ್ಟದ ಹಾಗೂ ಪರಿಣಾಮಕಾರಿ ಶಿಕ್ಷಣಕ್ಕೆ ಮಾನವ ಸಂಪನ್ಮೂಲಗಳ ಅಗತ್ಯತೆಯಿದೆ. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಹುದ್ದೆಗಳು ಖಾಲಿಯಿರುರುವುದರಿಂದ ಈಗಿರುವ ಸಿಬ್ಬಂದಿಗಳೇ ಹೇಗೋ ಸರಿದೂಗಿಸಿಕೊಂಡು ಹೆಚ್ಚುವರಿ ಜವಾಬ್ದಾರಿಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾನವ ಸಂಪನ್ಮೂಲಗಳ ಕೊರತೆಯಿಂದಾಗಿ ಕೆಲವೆಡೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮಾನವ ಸಂಪನ್ಮೂಲಗಳ ಕೊರತೆ ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದ್ದು, ಅಲ್ಲದೇ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಸಿಬ್ಬಂದಿಗಳ ಮೇಲೂ ಸಹ ಪರಿಣಾಮವುಂಟಾಗುತ್ತಿದೆ ಎಂದು ಕೃಷಿ ಸಚಿವರು ಭೇಟಿ ವೇಳೆ ಸಿಎಂಗೆ ಮನವರಿಕೆ ಮಾಡಿಕೊಟ್ಟು ಮಾನವಸಂಪನ್ಮೂಲಗಳ ಹೆಚ್ಚಳಕ್ಕೆ ಮನವಿ ಮಾಡಿದರು.

ಭೇಟಿಗೂ ಮುನ್ನ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಕಚೇರಿಯಲ್ಲಿ ಕುಲಪತಿಗಳ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಕೃಷಿ ಅನುಸಂಧಾನ ಪರಿಷತ್ತಿನ ಎಐಸಿಆರ್ ಪಿ ಯೋಜನೆಗಳಲ್ಲಿ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದಿಂದ ಶೇ.80 ಹಾಗು ಶೇ.100 ರಷ್ಟು ಅನುದಾನ ಬರುತ್ತಿರುವುದರಿಂದ ಕೆವಿಕೆ ಹಾಗೂ ಐಸಿಆರ್ ಪೋಸ್ಟ್ ಗಳ ನೇಮಕಾತಿ ಮಾಡಲು ಕೂಡಲೇ ಅನುಮತಿ ಗೆ ಸಚಿವರಿಗೆ ಕುಲಪತಿಗಳು ಮನವಿ ಮಾಡಿದರು. ಅಲ್ಲದೇ ಶಿವಮೊಗ್ಗದ ನೂತವಾಗಿ ನಿರ್ಮಾಣಗೊಂಡಿರುವ ಇರುವಕ್ಕಿ ಕೃಷಿ ಮತ್ತು ತೋಟಗಾರಿಗೆ ವಿಶ್ವವಿದ್ಯಾಲಯದ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.

ಕೃಷಿ ಶಿಕ್ಷಣ ಎಂದಮೇಲೆ ಎಲ್ಲಾ ವಿಶ್ವವಿದ್ಯಾಲಯಗಳು ಒಂದೇಯಾಗಿದ್ದು, ಯಾವುದೇ ವಿಶ್ವವಿದ್ಯಾಲಯಗಳು ಬೇರೆಬೇರೆ ಎಂದು ಭಾವಿಸಬಾರದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಕಲಿಕೆಯ ಹಿತದೃಷ್ಟಿಯಿಂದ ಸಮಾನವಾಗಿ ಕೆಲಸ ಮಾಡಬೇಕು. ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಯ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಿರಬೇಕು. ಕೃಷಿಯಲ್ಲಿ ನವೀನತೆ ಹಾಗೂ ಕೃಷಿ ಇಲಾಖೆಯ ಅಭಿವೃಧ್ಧಿಗೆ ವಿಶ್ವವಿದ್ಯಾಲಯಗಳ ಸಹಭಾಗಿತ್ವವೂ ಮುಖ್ಯವಾಗಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ತಾವು ಬೇರೆ ಎಂದು ಭಾವಿಸದೇ ಇಲಾಖೆ ಜೊತೆ ಸಂಪರ್ಕ ಸಾಧಿಸಬೇಕು. ಅಲ್ಲದೇ ಕೃಷಿ ಇಲಾಖೆಯೂ ಸಹ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಹೊಸಹೊಸ ಕೃಷಿ ಆವಿಷ್ಕಾರಗಳ ಬಗ್ಗೆ ವಿಜ್ಞಾನಿಗಳ ಜೊತೆ ಸಹಕರಿಸಬೇಕೆಂದು ಕೃಷಿ ಸಚಿವರು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *