ಸಿಎಂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಾರ: ಡಿಸಿಎಂ ಗೋವಿಂದ ಕಾರಜೋಳ

ಕಲಬುರಗಿ: ಬಡವರು, ಗುಳೆಹೋಗುವವರು ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚಾಗಿದ್ದಾರೆ. ಹೀಗಾಗಿ ಈ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಕಲಬುರಗಿಯಲ್ಲಿ ಇಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಿಂದಿನ ಅವಧಿಯಲ್ಲಿ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ, ಈ ಭಾಗದ ಯೋಜನೆಗಳಿಗೆ ಅನುದಾನ ನೀಡಿದ್ದರು. ಗುಲಾಮಗಿರಿಯ ಸಂಕೇತ ಕಳಚಲು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ವರ್ಷದ ಹಿಂದೆ ನಾಮಕರಣ ಮಾಡಿದ್ದಾರೆ. ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಾರ ಎಂದು ಬಣ್ಣಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಈ ಭಾಗದಲ್ಲಿ 30 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಿದ್ದು, ಕೆಲವೊಂದು ಪೂರ್ಣಗೊಂಡಿವೆ. ಅವುಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು. ಕಳೆದ ವರ್ಷ ರಾಜ್ಯದಲ್ಲಿ ಬರ, ನೆರೆ ಮತ್ತು ಪ್ರವಾಹದ ಸಂಕಷ್ಟ ಇತ್ತು. ಈ ವರ್ಷ ನೆರೆ ಮತ್ತು ಕೊರೊನಾ ಸಂಕಷ್ಟ ಎದುರಾಗಿದೆ. ಈ ಸಂಕಷ್ಟಗಳ ಮಧ್ಯೆಯೂ ನಮ್ಮ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಈ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಮಾನ್ಯ ಮುಖ್ಯಮಂತ್ರಿಗಳು ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕಲಬುರಗಿಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

Comments

Leave a Reply

Your email address will not be published. Required fields are marked *