ಸಿಎಂ ಆಸ್ಪತ್ರೆಯಲ್ಲಿದ್ದಾರೆ, ಬಿಜೆಪಿ ಸರ್ಕಾರ ಐಸಿಯುನಲ್ಲಿದೆ – ಸಿದ್ದರಾಮಯ್ಯ

ರಾಜ್ಯ ಬಿಜೆಪಿ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ
– ಆಡಳಿತ ಪಕ್ಷದ ಶಾಸಕರೇ ಕೊರೊನಾ ನಿಯಮ ಉಲ್ಲಂಘಿಸುತ್ತಿದ್ದಾರೆ

ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಬಿಎಸ್ ವೈ ಆಸ್ಪತ್ರೆಯಲ್ಲಿದ್ದಾರೆ, ರಾಜ್ಯ ಬಿಜೆಪಿ ಸರ್ಕಾರ ಐಸಿಯುನಲ್ಲಿದ್ದಾರೆ ಎಂದು ಸಾಲುಸಾಲಾಗಿ ಟ್ವೀಟ್ ಮಾಡುವ ಮೂಲವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲಿಕ್ಕಾಗದ ರಾಜ್ಯ ಬಿಜೆಪಿ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ. ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗೆ ಇಲ್ಲ. ಆಮ್ಲಜನಕದ ದಾಸ್ತಾನಿಲ್ಲ, ರೆಮಿಡಿಸಿವಿರ್ ನಂತಹ ಜೀವರಕ್ಷಕ ಔಷಧಿಯ ಕೊರತೆ ಇದೆ ಎಂದು ಟ್ವೀಟ್ ಮಾಡುವ ಮೂಲಕವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವರ್ಷದ ಹಿಂದೆ ಮೊದಲ ಬಾರಿ ಕೊರೊನಾ ದಾಳಿ ಇಟ್ಟಾಗ ಅದು ಅನಿರೀಕ್ಷಿತ ಆಘಾತ. ಒಂದು ವರ್ಷದ ಅನುಭವದಿಂದ ರಾಜ್ಯ ಸರ್ಕಾರ ಕೊರೊನಾ ಎದುರಿಸಲು ತನ್ನನ್ನು ಇನ್ನಷ್ಟು ಸಜ್ಜುಗೊಳಿಸಬೇಕಾಗಿತ್ತು. ಕೊರೊನಾವನ್ನೂ ತನ್ನ ಭ್ರಷ್ಟತೆಗೆ ಬಳಸಿಕೊಂಡ ಬಿಜೆಪಿ ಸರ್ಕಾರ ಈಗ ಕೈಚೆಲ್ಲಿ ಕೂತಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಮಾರ್ಗಸೂಚಿಗಳನ್ನು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಸಿಎಂ ಅವರಿಗೆ ಸಚಿವರ ಮೇಲಾಗಲಿ, ಶಾಸಕರ ಮೇಲಾಗಲಿ ನಿಯಂತ್ರಣವೇ ಇಲ್ಲದೆ ನಿರ್ಮಾಣಗೊಂಡಿರುವ ಅರಾಜಕತೆಯೇ ಇಂದಿನ ದುಸ್ಥಿತಿಗೆ ಕಾರಣವಾಗಿದೆ ಎಂದು ಟ್ವೀಟ್ ದಾಳಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *