ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆ ಧ್ವಂಸಕರಿಗೆ ಸುದೀಪ್ ಎಚ್ಚರಿಕೆ

– ನಿಮ್ಮ ಹೆಸ್ರು ಗೊತ್ತಾದ ದಿನ ದೇಶ ಬಿಟ್ಟು ಹೋಗಿ

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ ಪ್ರತಿಮೆ ಧ್ವಂಸಕರಿಗೆ ಅಭಿನಯ ಚಕ್ರವರ್ತಿ ರನ್ನ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದು, ನಿಮ್ಮ ಹೆಸರು ತಿಳಿಯುವ ಮೊದಲು ದೇಶ ಬಿಟ್ಟು ಹೋಗಿ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.

ವಿಷ್ಣು ಸರ್ ಪ್ರತಿಮೆ ಧ್ವಂಸಗೊಳಿಸಿರುವ ವಿಷಯ ನನಗೆ ತಡವಾಗಿ ತಿಳಿಯಿತು. ವಿಷ್ಣು ಸರ್ ಅಭಿಮಾನಿಯಾಗಿ ಮೂರ್ತಿಯನ್ನ ಒಡೆದು ಹಾಕಿರೋರಿಗೆ ಕೆಲ ವಿಷಯಗಳನ್ನ ಹೇಳಲು ಇಷ್ಟಪಡುತ್ತೇನೆ. ಮೂರ್ತಿ ಒಡೆದು ಹಾಕಿರುವ ಧ್ವಂಸಕರು ಸಿಕ್ಕರೆ ವಿಷ್ಣು ಸರ್ ಅಭಿಮಾನಿಗಳು ನಿಮ್ಮನ್ನ ಅದಕ್ಕಿಂತ ಹೀನಾಯವಾಗಿ ಒಡೆದು ಹಾಕುತ್ತಾರೆ. ಮೂರ್ತಿ ಒಡೆದು ಹಾಕಿರುವವರು ಮನುಷ್ಯರೇ ಅಲ್ಲ. ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಹೆಸರು ಗೊತ್ತಾದ ದಿನ ಏನು ನಡೆಯುತ್ತೆ ಅದನ್ನ ಯಾರಿಂದಲೂ ತಡೆಯಲು ಆಗಲ್ಲ.

ಆ ಮೂರ್ತಿಯನ್ನ ಒಡೆಯುವ ಮುನ್ನ ಒಂದು ಸಲ ನೀವೂ ಯೋಚನೆ ಮಾಡಿದ್ದರೆ ಒಬ್ಬ ಮನುಷ್ಯನಾಗಿ ಮಾಡೋ ಕೆಲಸವೇ ಅಲ್ಲ. ಎಂತಹವರು ಅಂತ ಹೇಳೋಕೆ ಹೋದ್ರೆ ಸೆನ್ಸಾರ್ ಸ್ಟಾರ್ಟ್ ಆಗುತ್ತೆ. ನಿಮ್ಮ ಹೆಸರು ಗೊತ್ತಾದ ದಿನ ದಯವಿಟ್ಟು ದೇಶ ಬಿಟ್ಟು ಓಡಿ ಹೋಗಿಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್‍ಗೇಟ್ ಅಂಡರ್ ಪಾಸ್ ಮೇಲಿದ್ದ ನಟ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನ ರಾತ್ರೋ ರಾತ್ರಿ ತೆಗೆಯಲಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿರುವ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಟೋಲ್‍ಗೇಟ್ ಸರ್ಕಲ್ ಗೆ ಶ್ರೀ ಬಾಲ ಗಂಗಾಧರ ಸ್ವಾಮೀಜಿ ವೃತ್ತ ಅಂತ ಹೆಸರಿಡಲಾಗಿದೆ. ಹಾಗಾಗಿ ವಿಷ್ಣುವರ್ಧನ್ ಪ್ರತಿಮೆ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮೀಜಿ ಸ್ಟ್ಯಾಚು ಇಡಲು ನಿರ್ಧರಿಸಲಾಗಿದೆ. ಹೀಗಾಗಿ ರಾತ್ರಿ ವಿಷ್ಣು ಪ್ರತಿಮೆ ತೆರವುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರತಿಮೆ ತೆಗೆಯುವ ಮೂಲಕ ಕನ್ನಡಿಗರಿಗೆ ಅವಮಾನಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನಿರುದ್ಧ, ಪ್ರತಿಷ್ಠಾಪನೆಯಾಗಿರುವ ಮೂರ್ತಿಯನ್ನ ರಾತ್ರೋ ರಾತ್ರಿ ಯಾರಿಗೂ ಹೇಳದೇ ತೆಗೆಯುವುದು ಎಷ್ಟು ಸೂಕ್ತ. ಈ ರೀತಿಯ ಕೆಲಸಗಳಿಂದ ಹಿರಿಯ ವ್ಯಕ್ತಿಗೆ ಅವಮಾನ ಮಾಡಿದಂತೆ ಆಗಲ್ವಾ? ಇದರಿಂದ ಅಭಿಮಾನಿಗಳಿಗೆ ದುಃಖ ಆಗುತ್ತೆ. ವಿಷ್ಣುವರ್ಧನ್ ಅಪ್ಪಾಜಿ ಪ್ರತಿಮೆಯನ್ನ ಯಾರು ತೆಗೆದ್ರು ಮತ್ತು ಯಾಕೆ ತೆಗೆದರು ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಕುಟುಂಬ ಎಲ್ಲರನ್ನ ಗೌರವಿಸುತ್ತೆ. ನಾವು ಯಾರ ಮಾತಿಗೆ ತಿರುಗೇಟು ನೀಡುವುದು ನಮಗೆ ಗೊತ್ತಿಲ್ಲ. ಸಚಿವರಾಗಿರುವ ಸೋಮಣ್ಣ ಅವರ ಮಾತುಗಳಿಗೆ ನಾವು ಗೌರವ ನೀಡುತ್ತೇವೆ. ಒಂದು ಪುತ್ಥಳಿಯನ್ನ ಪ್ರತಿಷ್ಠಾಪನೆ ಮಾಡುವಾಗಲೇ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಪ್ರತಿಷ್ಠಾಪನೆ ವಿಚಾರದಲ್ಲಿ ಯಾವ ತೊಂದರೆಯೂ ಇಲ್ಲ ಅಂದ್ಮೇಲೆ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಅಪ್ಪಾಜಿ ಅವರ ಬಗ್ಗೆಯೇ ಈ ರೀತಿ ಯಾಕೆ ಆಗ್ತಿದೆ. ಒಂದು ವೇಳೆ ಪ್ರತಿಮೆ ಸ್ಥಳಾಂತರಿಸುವದಿದ್ದರೆ ಎಲ್ಲರ ಜೊತೆ ಮಾತುಕತೆ ನಡೆಸಿ ಗೌರವಯುತವಾಗಿ ತೆಗೆಯಬಹದಿತ್ತು ಎಂದರು.

ವಿ.ಸೋಮಣ್ಣ ಹೇಳಿದ್ದೇನು?: 40 ವರ್ಷಗಳ ಹಿಂದೆಯೇ ಬಾಲಗಂಗಾಧರೇಶ್ವರ ವೃತ್ತ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾನು ಮತ್ತು ವಿಷ್ಣುವರ್ಧನ್ ಆತ್ಮೀಯರು. ಆದ್ರೆ ಈ ಪ್ರತಿಮೆ ಏಕೆ ತೆರವು ಆಯ್ತು ಅಂತ ಮಾಹಿತಿ ಇಲ್ಲ. ಆದ್ರೆ ಈ ಪ್ರದೇಶದಲ್ಲಿ ತಿಳಿದೋ ಅಥವಾ ತಿಳಿಯದೋ ಅಲ್ಲಿ ಪ್ರತಿಮೆ ಇರಿಸಲಾಗಿತ್ತು. ಮುಂದಿನ ನಾಲ್ಕೈದು ದಿನಗಳಲ್ಲಿ ಒಳ್ಳೆ ಕಡೆ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ವಿಷ್ಣುವರ್ಧನ್ ನನಗೆ ಆತ್ಮೀಯರಲ್ಲಿ ಆತ್ಮೀಯರು. ನನ್ನ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದು ಈಗ ಹೇಳಲು ಸಮಯ ಇಲ್ಲ. ಇದೊಂದು ಸೂಕ್ಷ್ಮ ಘಟನೆಯಾಗಿದ್ದು, ನಡೆದ ಅತಾಚುರ್ಯಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿ ಬೇಕಾದ್ರೂ ಸ್ಥಾಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *