ಸಾಲಗಾರರ ಕಿರುಕುಳದಿಂದ ಬೇಸತ್ತು ಫ್ಯಾನಿಗೆ ನೇಣು ಬಿಗಿದುಕೊಂಡ ಯುವಕ!

– ಆನ್‍ಲೈನ್ ಮೂಲಕ ಸಾಲ ಮಾಡಿದ್ದ ಹರೀಶ್

ನವದೆಹಲಿ: ಸಾಲ ಮರುಪಾವತಿಸುವಂತೆ ಕಿರಿಕುಳ ನೀಡಿದ್ದರಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ಹರೀಶ್(25) ಎಂದು ಗುರುತಿಸಲಾಗಿದೆ. ಈತ ಮನೆಯೊಳಗಡೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹರೀಶ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದನು. ಅದರಲ್ಲಿ ಸ್ವಲ್ಪ ಸಾಲ ಮರುಪಾವತಿ ಮಾಡಲು ಬಾಕಿ ಉಳಿದಿತ್ತು. ಆದರೆ ಈ ಹಣವನನ್ನು ವಾಪಸ್ ಮಾಡುವಂತೆ ಹರೀಶ್ ಗೆ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಮನನೊಂದ ಹರೀಶ್ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.

ಅಜ್ಜಿ ಅಂಗಡಿಗೆ ಹೋಗಿ ಹಾಲು ತೆಗೆದುಕೊಂಡು ಮನೆಗೆ ವಾಪಸ್ಸಾದಾಗ ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಎಂದಿನಂತೆ ಹಾಲು ತೆಗೆದುಕೊಂಡು ಬಂದು ಅಜ್ಜಿ ಮನೆ ಬಾಗಿಲು ಬಡಿದಿದ್ದಾರೆ. ಆದರೆ ಮನೆಯಲ್ಲಿಯೇ ಇದ್ದ ಹರೀಶ್ ಒಳಗಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಗಾಬರಿಗೊಂಡ ಅಜ್ಜಿ ಮನೆ ಕಿಟಿಕಿಯಿಂದ ಒಳಗಡೆ ಇಣುಕಿದ್ದಾರೆ. ಈ ವೇಳೆ ಹರೀಶ್ ಫ್ಯಾನಿಗೆ ನೇಣು ಬಿಗಿದುಕೊಳ್ಳುತ್ತಿದ್ದನು. ಕೂಡಲೇ ಅಜ್ಜಿ ಸ್ಥಳೀಯ ನಿವಾಸಿಗಳನ್ನು ಕೂಗಿ ಕರೆದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನೆರೆಮನೆಯವರು, ಹರೀಶ್ ನನ್ನು ಕುಣಿಕೆಯಿಂದ ಬಿಡಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಹರೀಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇತ್ತ ಘಟನೆ ನಡೆದ ತಕ್ಷಣ ಪೊಲೀಸರಿಗೆ ಕೂಡ ಮಾಹಿತಿ ರವಾನಿಸಲಾಯಿತು. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿ ಕುಟುಂಬದ ಸದ್ಯರ ಹೇಳಿಕೆಗಳನ್ನು ಪಡೆದು ಅಸಹಜ ಸಾವು ಎಂದು ಪರಿಗಣಿಸಿ, ತನಿಖೆ ಆರಂಭಿಸಿತು.

ನವೆಂಬರ್ 25ರಂದು ಹರೀಶ್ ಗೆ ಹಲವಾರು ನಂಬರ್ ಗಳಿಂದ ಕರೆಗಳ ಮೇಲೆ ಕರೆಗಳು ಬರುತ್ತಿದ್ದವು. ಹರೀಶ್ 6 ಸಾವಿರ ಸಾಲ ಮಾಡಿದ್ದು, ಅದರಲ್ಲಿ ಮೂರು ಸಾವಿರ ವಾಪಸ್ ಹಿಂದಿರುಗಿಸಿರಲಿಲ್ಲ ಎಂದು ಹರೀಶ್ ಸಹೋದರಿ ಸೋಮ ಹೇಳಿದ್ದಾರೆ ಅಂತ ದ್ವಾರಕಾ ಡಿಸಿಪಿ ಸಂತೋಷ್ ಮೀನಾ ತಿಳಿಸಿದ್ದಾರೆ.

ಹರೀಶ್ ಆತ್ಮಹತ್ಯೆಗೆ ಶರಣಾಗುವ ದಿನ ಬೆಳಗ್ಗೆ ಸಹೋದರಿ ಆತನಿಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೆ ಭೇಟಿ ಕೂಡ ಮಾಡಿದ್ದರು. ಹರೀಶ್ ಎಂದಿನಂತೆ ಅಂದು ಕೂಡ ಅಂಗಡಿಗೆ ಹೋಗಿದ್ದನು. ಉಳಿದ ದಿನಗಳಲ್ಲಿ ಸಂಜೆ ತಡವಾಗಿ ಬರುತ್ತಿದ್ದ ಆತ ಅಂದು ಮಾತ್ರ ಕೇವಲ ಒಂದೇ ಗಂಟೆಯಲ್ಲಿ ಮನೆಗೆ ವಾಪಸ್ಸಾಗಿದ್ದನು. ಈ ವೇಳೆ ಏನಿವತ್ತು ಬೇಗ ಬಂದಿದ್ದೀಯಾ ಅಂತ ಕೇಳಿದೆ. ಆತ ಏನೂ ಹೇಳದೆ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡನು.

ಇದಾದ ಬಳಿಕ ಸಹೋದರಿ ಆಫೀಸಿಗೆ ತೆರಳಿದರು. ಅದೇ ದಿನ ಸಂಜೆ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರೀಶ್ ಸಾಲ ಮರುಪಾವತಿಸದಿರುವ ಬಗ್ಗೆ ಅನೇಕ ಸಂಬಂಧಿಕರು ಕೂಡ ದೂರವಾಣಿ ಕರೆಗಳ ಮೂಲಕ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ವಾಸ್ತವವಾಗಿ ಹೃಈಸ್ ಆನ್ ಲೈನ್ ಮೂಲಕ ಸಾಲ ಪಡೆದಿದ್ದಾನೋ, ಇಲ್ಲವೋ ಎಂಬುದು ಕುಟುಂಬದ ಸದಸ್ಯರಿಗೆ ತಿಳಿಯುವುದಕ್ಕೂ ಮುನ್ನವೇ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಾಟ್ಸಪ್ ಗ್ರೂಪ್ ಗೆ ಹರೀಶ್ ನಂದಕಿಶೋರ್ ಫ್ರಾಡ್ ಎಂದು ಹೆಸರಿಡಲಾಗಿತ್ತು. ಈ ಗ್ರೂಪಲ್ಲಿ ಹರೀಶ್ ನ ಕೆಲ ಸಂಬಂಧಿಕರನ್ನು ಕೂಡ ಸೇರಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ ಇನ್ನೂ ಕೆಲ ಸಂಬಂಧಿಕರನ್ನು ಸೇರಿಸುವುದಾಗಿ ಬೆದರಿಕೆ ಕೂಡ ಹಾಕಲಾಗಿತ್ತು. ಇದರಿಂದ ಬೇಸತ್ತು ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಹರೀಶ್ ಸಾವಿನ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಸಾಲ ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಆನ್ ಲೈನ್ ಮೂಲಕ ಸಾಲ ಪಡೆಯುವುದನ್ನು ತಪ್ಪಿಸಬೇಕು ಎಂದು ಸೈಬರ್ ತಜ್ಞರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *