ಸಾಂತ್ವನ ಕೇಂದ್ರದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ರಾಗಿಣಿ

– ಮತ್ತೆ ಸಿಸಿಬಿ ಕಸ್ಟಡಿಗೆ ವೀರೇನ್ ಖನ್ನ, ರವಿಶಂಕರ್

ಬೆಂಗಳೂರು: ಮತ್ತೆ 5 ದಿನ ಸಿಸಿಬಿ ಕಸ್ಟಡಿ ವಿಚಾರ ಕೇಳಿ ನಟಿ ರಾಗಿಣಿ ದ್ವಿವೇದಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಅನಾರೋಗ್ಯ ನೆಪವೊಡ್ಡಿದರೆ ಬೇಲ್ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ರಾಗಿಣಿ ಇದ್ದರು. ಆದರೆ ಇದೀಗ ಮತ್ತೆ ಸಿಸಿಬಿ 5 ದಿನ ಕೇಳಿದ್ದರಿಂದ ನಟಿಗೆ ನಿರಾಸೆಯಾಗಿದೆ. ಹೀಗಾಗಿ ಪೊಲೀಸರ ಪ್ರಶ್ನೆಗೆ ರಾಗಿಣಿ ಮೌನಕ್ಕೆ ಶರಣಾದರು.

ಕಳೆದ ಮೂರು ದಿನಗಳಿಂದ ಅನಾರೋಗ್ಯ ನೆಪದಿಂದ ನಟಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸದಿದ್ರೆ ಮತ್ತಷ್ಟು ಸಂಕಷ್ಟದ ಬಗ್ಗೆ ರಾಗಿಣಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸದ್ಯ ಸಾಂತ್ವನ ಕೇಂದ್ರದಲ್ಲೇ ರಾಗಿಣಿ ಏಕಾಂಗಿಯಾಗಿ ಕುಳಿತಿದ್ದಾರೆ. ಸಿಸಿಬಿ ಅಧಿಕಾರಿಗಳು ಮಧ್ಯಾಹ್ನದ ನಂತರ ಕೇವಲ ಒಂದು ಗಂಟೆ ವಿಚಾರಣೆ ನಡೆಸಿ ವಾಪಸ್ ಬಂದಿದ್ದಾರೆ. ವಿಚಾರಣೆಯಲ್ಲಿ ರಾಗಿಣಿ ಬಾಯ್ಬಿಟ್ಟ ವಿಚಾರಗಳ ಬಗ್ಗೆ ಅಧಿಕಾರಿಗಳು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜೊತೆಗೆ ಚರ್ಚೆ ಮಾಡುತ್ತಿದ್ದಾರೆ.

ಮತ್ತೆ 8 ದಿನ ಸಿಸಿಬಿ ಕಸ್ಟಡಿಗೆ ಖನ್ನ, ರವಿಶಂಕರ್:
ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯಿತು. ಸಿಸಿಬಿ ಪರ ವಕೀಲರು ರಾಗಿಣಿ ವಿಚಾರಣೆ ನಡೆಸಬೇಕಿದೆ. ಹೀಗಾಗಿ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದರು. ಈ ಬೆನ್ನಲ್ಲೇ ಇದೀಗ ವೀರೇನ್ ಖನ್ನ ಮತ್ತು ರವಿಶಂಕರ್ ಗೆ ಮತ್ತೆ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಸಿಸಿಎಚ್ 33ನೇ ನ್ಯಾಯಾಧೀಶರು ಆದೇಶ ಮಾಡಿದರು.

Comments

Leave a Reply

Your email address will not be published. Required fields are marked *