ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ

– ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ
– ಬಿಜೆಪಿ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ

ಮೈಸೂರು: ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಎರಡು ವರ್ಷ ಪೂರೈಸುತ್ತಾರೆ. ಮುಂದಿನ ಚುನಾವಣೆಯು ಅವರ ನೇತೃತ್ವದಲ್ಲಿ ನಡೆಯಲಿದೆ. ನಾವು ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಮದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ಇಂತಹ ನಾನು ಸಚಿವನಾಗುವುದಕ್ಕೆ ಲಾಭಿ ಮಾಡುತ್ತೇನಾ?, ನನಗೆ ಇನ್ನೂ ಆ ಸ್ಥಿತಿ ಬಂದಿಲ್ಲ. ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದಿದ್ದು ಅವರ ಮಾತೃ ಶ್ರೀ ನಿಧನಕ್ಕೆ ಸಂತಾಪ ಸೂಚಿಸಲು ಎಂದರು.

ಇಲ್ಲಿ ಯಾವ ರಾಜಕಾರಣವನ್ನು ಚರ್ಚೆ ಮಾಡಿಲ್ಲ. ಇನ್ನೊಬ್ಬರನ್ನ ಸಚಿವನನ್ನಾಗಿ ಮಾಡುವ ಶಕ್ತಿ ಇರುವ ನಾನು, ಸಚಿವನಾಗೋಕೆ ಲಾಬಿ ಮಾಡುತ್ತೇನಾ?. ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ. ಆದರೆ ಕೆಲವು ಹಿರಿಯರ ಸಲಹೆಯ ಮೇರೆಗೆ ಈಗ ಅದನ್ನು ಕೈಬಿಟ್ಟಿದ್ದೇನೆ. 8 ರಿಂದ 10 ದಿನ ನನಗೆ ಮಾಧ್ಯಮದವರು ಬಿಟ್ಟು ಬಿಡಿ. ನಾನು ಅಲ್ಲಿಯವರೆಗು ಏನೂ ಮಾತಾಡಲ್ಲ. ನಾನು ಮನಸ್ಸು ನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ ಎಂದು ರಮೇಶ್ ಜಾರಕಿಹೊಳಿ ಪದೇ ಪದೇ ಒತ್ತಿ ಹೇಳಿದರು.

ರಾಜೀನಾಮೆ ಕೊಟ್ಟರೂ ನಾನೊಬ್ಬನೇ ಕೊಡ್ತೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು ನಾನೇಕೆ ಆ ಪಕ್ಷಕ್ಕೆ ಹೋಗಲಿ. ಬಿಜೆಪಿ ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡೋದಿಲ್ಲ. ನಾನು ಮುಂಬೈಗೆ ಹೋಗಿದ್ದು ಸತ್ಯ. ದೇವೇಂದ್ರ ಫಡ್ನವಿಸ್ ನನ್ನ ರಾಜಕೀಯ ಗಾಡ್ ಫಾದರ್. ಅವರ ಬಳಿ ನನ್ನ ಮನಸ್ಸಿನ ನೋವುಗಳನ್ನ ಹೇಳಿಕೊಂಡಿದ್ದೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *