ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದ್ರೆ ಉಡುಪಿಯಲ್ಲಿ ಖಾಸಗಿ ಬಸ್ ಓಡಾಟ ಶುರು

_ ಇಂದು 19 ಸರ್ಕಾರಿ ಬಸ್ ಸಂಚಾರ

ಉಡುಪಿ: ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿದರೂ ಉಡುಪಿಯಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ. ಬಸ್ ಓಡಿಸಿ ಎಂದು ಸರ್ಕಾರ ಆದೇಶಿಸಿದರೂ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ.

ಕಳೆದ 55 ದಿನಗಳಿಂದ ಉಡುಪಿಯ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಗಳು ಸಂಪೂರ್ಣವಾಗಿ ಸ್ತಬ್ಧ ಆಗಿದೆ. ವಾರದ ಹಿಂದೆ ರೂಟ್ ಸರ್ವೆ ಮಾಡಿಸಿರುವ ಉಡುಪಿ ಡಿಸಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳನ್ನು ಓಡಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಸಾರ್ವಜನಿಕರಿಂದ ಬೇಡಿಕೆಗಳು ಬಾರದ ಹಿನ್ನೆಲೆಯಲ್ಲಿ ಬೆರಳೆಣಿಕೆಯ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಉಡುಪಿಯಲ್ಲಿ ಓಡಾಟ ನಡೆಸಿದ್ದವು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್‍ಡೌನ್ ಸಡಿಲಿಕೆ ಮಾಡಿ ಅಂತರ್ ಜಿಲ್ಲೆಗಳಿಗೆ ಬಸ್ ಓಡಾಡಬಹುದು ಎಂದು ಆದೇಶಿಸಿದರು. ಆದರೂ ಉಡುಪಿಯಲ್ಲಿ ಭಾರತಿ ಕಂಪೆನಿಯ ಖಾಸಗಿ ಬಸ್ಸು ಮಾತ್ರ ಜನ ಸೇವೆಯಲ್ಲಿ ತೊಡಗಿತ್ತು. ಉಡುಪಿ ಕುಂದಾಪುರ ರೂಟ್‍ನಲ್ಲಿ ಮಾತ್ರ ಈ ಬಸ್ಸುಗಳು ಓಡಾಡಿದವು. ಕುಂದಾಪುರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟ ನಡೆಸಿದೆ. ಉಡುಪಿ-ಮಣಿಪಾಲದ ನಡುವೆ ನರ್ಮ್ ಬಸ್ ಗಂಟೆಗೆ ಒಂದು ಟ್ರಿಪ್ ಮಾಡಿದೆ.

ಬಸ್ಸನ್ನೆಲ್ಲಾ ಮಾಲೀಕರು ಆರ್‌ಟಿಒಗೆ ಒಪ್ಪಿಸಿವೆ. ಈಗ ಬಸ್ ಓಡಿಸಿದರೆ ಪ್ರತಿ ಬಸ್ಸಿಗೆ 50 ಸಾವಿರ ರೂಪಾಯಿ ಟ್ಯಾಕ್ಸ್ ಪಾವತಿಸುವ ಸ್ಥಿತಿಯಲ್ಲಿ ಮಾಲೀಕರಿಲ್ಲ. ಹಾಗಾಗಿ ಬಸ್‍ಗಳು ರಸ್ತೆಗೆ ಇಳಿದಿಲ್ಲ. ಒಂದು ತಿಂಗಳಿಗೆ ಒಂದು ಬಸ್ಸಿಗೆ 18 ಸಾವಿರ ರೂಪಾಯಿ ಟ್ಯಾಕ್ಸ್ ಆಗುತ್ತಿದೆ. ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದರೆ ಬಸ್ಸನ್ನು ಹೊರಡಿಸಬಹುದು ಎಂದು ಖಾಸಗಿ ಬಸ್ ಮಾಲೀಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

19 ಸರ್ಕಾರಿ ಬಸ್ ಸಂಚಾರ:
ಈ ನಡುವೆ ಕೆಎಸ್‌ಆರ್‌ಟಿಸಿ ಬೆಂಗಳೂರು, ಮೈಸೂರು ಹುಬ್ಬಳ್ಳಿಗೆ ಟ್ರಿಪ್ ಶುರು ಮಾಡಿದೆ. ಕುಂದಾಪುರ ಡಿಪೋದಿಂದ 9 ಬಸ್ಸುಗಳು ಇಂದು ಓಡಾಟ ಮಾಡಿದೆ. ಉಡುಪಿಯಲ್ಲಿ 10 ಬಸ್ ಹೊರ ಜಿಲ್ಲೆಗೆ ಹೊರಟಿವೆ. ಸಂಜೆ ಏಳು ಗಂಟೆಯ ಒಳಗೆ ಪ್ರಯಾಣಿಕರು ಗುರಿ ತಲುಪುವ ಉದ್ದೇಶವನ್ನು ಕೆಎಸ್‌ಆರ್‌ಟಿಸಿ ಇಟ್ಟುಕೊಂಡಿರುವುದರಿಂದ ಮಧ್ಯಾಹ್ನದ ನಂತರ ದೂರದ ಜಿಲ್ಲೆಗಳಿಗೆ ಬಸ್ ಹೊರಟಿಲ್ಲ.

ಎರಡು ತಿಂಗಳು ಸಂಬಂಧಿಕರ ಮನೆಯಲ್ಲಿ ಲಾಕ್ ಆಗಿದ್ದವರು, ಲಾಕ್‍ಡೌನ್ ಸಂದರ್ಭ ಮನೆಗೆ ಬಂದವರು ವಾಹನಗಳು ಇಲ್ಲದೇ ಸಿಕ್ಕಿ ಹಾಕಿಕೊಂಡವರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು. ಶೇ. 90ರಷ್ಟು ಜನ ಖಾಸಗಿ ಬಸ್ಸುಗಳನ್ನೇ ಉಡುಪಿಯಲ್ಲಿ ನೆಚ್ಚಿಕೊಂಡಿದ್ದಾರೆ. ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದರೆ ಈ ವಾರದಲ್ಲಿ ಉಡುಪಿಯಲ್ಲಿ ಖಾಸಗಿ ಬಸ್ಸುಗಳನ್ನು ಹೊರಡಿಸುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *