ಸರ್ಕಾರ ಐಸಿಯುವಿನಲ್ಲಿಲ್ಲ, ಸಿದ್ದರಾಮಯ್ಯನವರೇ ಐಸಿಯುನಲ್ಲಿದ್ದಾರೆ: ಸೋಮಶೇಖರ್

ಮೈಸೂರು: ಸರ್ಕಾರ ಐಸಿಯುವಿನಲ್ಲಿಲ್ಲ, ಸಿದ್ದರಾಮಯ್ಯನವರೇ ಐಸಿಯುವಿನಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಎಸ್‍ಟಿ ಸೋಮಶೇಖರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಬಿಎಸ್‍ವೈ ಆಸ್ಪತ್ರೆಯಲ್ಲಿದ್ದಾರೆ, ರಾಜ್ಯ ಬಿಜೆಪಿ ಸರ್ಕಾರ ಐಸಿಯುವಿನಲ್ಲಿದೆ ಎಂದು ಸಿದ್ದರಾಮಯ್ಯ ನಿನ್ನೆ ಸಾಲು ಸಾಲು ಟ್ವೀಟ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಎಸ್ ಟಿ ಸೋಮಶೇಖರ್, ಸಿಎಂಗೆ ಕೋವಿಡ್ ಪಾಸಿಟಿವ್ ಇರುವ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಐಸಿಯುವಿನಲ್ಲಿರುವುದು ಸರ್ಕಾರ ಅಲ್ಲ, ಸಿದ್ದರಾಮಯ್ಯ ಎಂದಿದ್ದಾರೆ.

ಮೈಸೂರಿನಲ್ಲಿ ದಿನೇದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುನ್ನಚ್ಚರಿಕೆ ಕ್ರಮ ಏನು ಕೈಗೊಳ್ಳಬೇಕು ಹಾಗೂ ಯಾವುದಾದರು ಹೊಸ ಆದೇಶ ಜಾರಿಗೊಳಿಸಬೇಕಾ ಎಂಬುದರ ಬಗ್ಗೆ ಇಂದು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಮೈಸೂರಿನಲ್ಲಿ ಬೆಡ್ ಆಕ್ಸಿಜನ್ ಕೊರತೆ ಇಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಲಾಕ್‍ಡೌನ್ ಅವಶ್ಯಕತೆ ಇಲ್ಲ. ಲಾಕ್‍ಡೌನ್‍ನಿಂದ ಜನರು ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಕಠಿಣ ಕ್ರಮಗಳ ಮೂಲಕ ವೈರಸ್ ನಿಯಂತ್ರಣ ಮಾಡಬಹುದು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಮೈಸೂರು ಡಿಸಿ ಆದೇಶ ರದ್ದಿಗೆ ಸಚಿವ ಸೋಮಶೇಖರ್ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕಡ್ಡಾಯವಾಗಿ ಕೊರೋನಾ ರಿಪೋರ್ಟ್ ತರಬೇಕೆಂದು ಮೈಸೂರು ಡಿಸಿ ಆದೇಶಿಸಿರಲಿಲ್ಲ. ಕೇವಲ ಸಲಹೆ ನೀಡಿ ಮನವಿ ಮಾಡಿದ್ದರು. ಆದರೆ ಇದನ್ನು ಯಾರೋ ತಿರುಚಿ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಡಿಸಿ ಅವರ ಎಲ್ಲ ಆದೇಶಗಳು ರದ್ದಾದವು. ಈ ವಿಚಾರವಾಗಿ ನಾನು ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ಪಟ್ಟೆ. ಅಷ್ಟರಲ್ಲಿ ಕಾಲ ಮಿಂಚಿತ್ತು ಎಂದು ಸ್ಪಷ್ಟನೆ ನೀಡಿದರು.

Comments

Leave a Reply

Your email address will not be published. Required fields are marked *