ಸರ್ಕಾರದ 10 ಎಡವಟ್ಟು, 100 ಆತಂಕ- ಕೊರೊನಾ ರಣಕೇಕೆ

-ಹತ್ತು ತಪ್ಪು ಹೆಜ್ಜೆ ತಂದಿಡ್ತು ನೂರು ಅಪತ್ತು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಗಂಡಾಂತರಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ಕಾರಣಗಳೇ ಎನ್ನಲಾಗುತ್ತಿದೆ. ಲಾಕ್‍ಡೌನ್ ಆದಗಿನಿಂದ ಅನ್‍ಲಾಕ್ ವರೆಗೂ ಸರ್ಕಾರ ದಿನಕ್ಕೊಂದು ನಿಯಮಗಳನ್ನು ಗೊಂದಲದಲ್ಲಿ ಜಾರಿಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ. ಸರ್ಕಾರ ಸರಣಿ ತಪ್ಪುಗಳಿಂದ ಹೆಮ್ಮಾರಿಯನ್ನು ರಾಜ್ಯದೊಳಗೆ ಆಹ್ವಾನಿಸಿಕೊಳ್ಳುತ್ತಾ ಅನ್ನೋ ಪ್ರಶ್ನೆ ಸಹ ಮೂಡಿದೆ. ಸರ್ಕಾರದ ಹತ್ತು ತಪ್ಪು ಹೆಜ್ಜೆಗಳು ನೂರು ಆಪತ್ತು ತಂದಿದೆ.

1. ದಿನಕ್ಕೊಂದು ಕ್ವಾರಂಟೈನ್ ನಿಯಮ: ಆರಂಭದಲ್ಲಿ ಅನ್ಯರಾಜ್ಯಗಳಿಂದ ಬಂದವರಿಗೆ 14 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿತ್ತು. ನಂತರ ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಅಂತ ಹೇಳಿ ನಿಯಮದಲ್ಲಿ ಬದಲಾವಣೆ ತರಲಾಯ್ತು. 14 ದಿನಗಳಿಂದ 7 ದಿನಗಳಿಗೆ ಸಾಂಸ್ಥಿಕ ಕ್ವಾರಂಟೇನ್ ಅವಧಿ ಇಳಿಕೆ ಮಾಡಲಾಗಿದೆ. ಇದೀಗ ಹೋಮ್ ಕ್ವಾರಂಟೇನ್ ಅವಧಿಯೂ 14 ದಿನಗಳಿಂದ 7 ದಿನಕ್ಕೆ ಇಳಿಸಲಾಗಿದೆ. ಸೋಂಕು ಹೆಚ್ಚಳ ಬೆನ್ನಲ್ಲೇ ಚೆನ್ನೈ, ದೆಹಲಿಯಿಂದ ಬಂದವರಿಗೆ 3 ದಿನ ಸಾಂಸ್ಥಿಕ ಕ್ವಾರಂಟೈನ್‍ಗೆ ಸರ್ಕಾರ ಆದೇಶಿಸಿದೆ.

2. ಟೆಸ್ಟ್ ರಿಪೋರ್ಟ್ ಇಲ್ಲದೇ ಎಂಟ್ರಿಗೆ ಅನುಮತಿ: ಕೊರೊನಾ ಹಬ್ ಆಗಿರೋ ಮಹಾರಾಷ್ಟ್ರದಿಂದ ಆಗಮಿಸುವ ಜನರಿಗೆ ಅನುಮತಿ ನೀಡಲಾಯ್ತು. ಒಂದು ವೇಳೆ ಕೊರೊನಾ ಪರೀಕ್ಷೆ ವರದಿ ಕಡ್ಡಾಯ ಮಾಡಿದ್ದರೆ ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ. ಇದರ ಜೊತೆಗೆ ಕ್ವಾರಂಟೈನ್ ಗೆ ಸಿದ್ಧತೆ ನಡೆಸದೇ ಅಂತರಾಜ್ಯದಿಂದ ಬಂದವರನ್ನು ಎಲ್ಲೆಂದರಲ್ಲಿ ಕ್ವಾರಂಟೈನ್ ಮಾಡಲಾಯ್ತು. ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥ ಮತ್ತು ಸಿಂಗಲ್ ಟಾಯ್ಲೆಟ್ ಬಳಕೆಯಿಂದ ಕೊರೊನಾ ಸೋಂಕು ಸ್ಫೋಟವಾಗಿರುವ ಸಾಧ್ಯತೆಗಳಿವೆ.

3. ರೋಗ ಲಕ್ಷಣ ಇದ್ದವರಿಗಷ್ಟೆ ಟೆಸ್ಟಿಂಗ್: ಆರಂಭದಲ್ಲಿ ಅನ್ಯರಾಜ್ಯದ ಬಂದ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಅನ್ಯರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಿದಂತೆ ಪರೀಕ್ಷೆಯನ್ನು ಕೈ ಬಿಟ್ಟಿತು. ಪೂರ್ವಸಿದ್ಧತೆ ಕೊರತೆ ಕಾರಣ ಅಗತ್ಯ ಕಿಟ್‍ಗಳ ಕೊರತೆ ಕಾಣಿಸಿತು. ಪರಿಸ್ಥಿತಿ ಕೈಮೀರುವ ಹೊತ್ತಲ್ಲಿ ರೋಗ ಲಕ್ಷಣ ಇದ್ದವರಿಗಷ್ಟೇ ಟೆಸ್ಟ್ ಎಂದ ಸರ್ಕಾರ ಹೇಳಿದೆ. ರಾಜ್ಯದ ಶೇಕಡಾ 94ರಷ್ಟು ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇಲ್ಲ. ಪರಿಣಾಮ ಸದ್ದಿಲ್ಲದೇ ರಾಜ್ಯದಲ್ಲಿ ಕೊರೊನಾ ವೈರಸ್ ಹಬ್ಬಿದೆ.

4. ಕೊರೊನಾ ಪರೀಕ್ಷೆ ಇಳಿಮುಖ: ದಿನದಿಂದ ದಿನಕ್ಕೆ ಸರ್ಕಾರ ಕೊರೊನಾ ಪರೀಕ್ಷೆಯನ್ನೇ ಇಳಿಮುಖ ಮಾಡುತ್ತಿದೆ. ಮೇ ಅಂತ್ಯಕ್ಕೆ ಪ್ರತಿದಿನ 15,000 ಟೆಸ್ಟ್ ಆಗುತ್ತಿದ್ದವು. ಆದರೆ ಜೂನ್ 13ರ ವೇಳೆಗೆ 7,000ಕ್ಕೆ ಇಳಿಕೆ ಕಂಡಿದೆ. ಲ್ಯಾಬ್ ಸಂಖ್ಯೆ ಹೆಚ್ಚಳವಾದರೂ ಟೆಸ್ಟ್ ಸಂಖ್ಯೆ ಇಳಿಮುಖ ಆಗಿದೆ.

5. ವಾರ್ ರೂಂ ವಿಶ್ಲೇಷಣೆ ಕಡೆಗಣನೆ: ಸೋಂಕು ಹೆಚ್ಚಳವಾಗುವ ಸಾಧ್ಯತೆಗಳಿವೆ. ಅನ್ಯರಾಜ್ಯದಿಂದ ಬಂದವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಎಂದು ವಾರ್ ರೂಂ ತಜ್ಞರ ತಂಡ ಸರ್ಕಾರಕ್ಕೆ ಸಲಹೆ ನೀಡಿತ್ತು. ವಾರ್ ರೂಂ ಸಲಹೆಯನ್ನು ಕಡೆಗಣಿಸಿದ ಸರ್ಕಾ ನಿಯಮಗಳನ್ನು ಸಡಿಲಿಕೆ ಮಾಡಿತು. ಸೋಂಕು ಲಕ್ಷಣ ಇದ್ದವರಿಗೆ ಮಾತ್ರ ಪರೀಕ್ಷೆ ಎಂದು ಆದೇಶಿಸಿ ಕೊರೊನಾ ಮಹಾ ಸ್ಫೋಟಕ್ಕೆ ಐದನೇ ಹೆಜ್ಜೆಯನ್ನು ಸರ್ಕಾರ ಇರಿಸಿತು.

6. ದ್ವಿತೀಯ ಸಂಪರ್ಕಿತರಿಗೆ ನೋ ಟೆಸ್ಟ್: ಕೊರೊನಾ ಸೋಂಕು ಕಾಣಿಸಿಕೊಂಡು ಆರಂಭಿಕದ ದಿನಗಳಲ್ಲಿ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿವರಿಗೆ ಕೋವಿಡ್ ಟೆಸ್ಟ್ ಮಾಡಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಸರ್ಕಾರ ದ್ವಿತೀಯ ಸಂಪರ್ಕಿತರ ಕೊರೊನಾ ಪರೀಕ್ಷೆಯನ್ನು ಕೈ ಬಿಟ್ಟಿತು.

7. ಡಿಸ್ಚಾರ್ಜ್ ಅವಧಿ ಇಳಿಕೆ: ಮೊದಲು ಕನಿಷ್ಠ 14 ದಿನಗಳ ನಂತರ ಗುಣಮುಖರಾದವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿತ್ತು. ಈ 14 ದಿನದಲ್ಲಿ ಎರಡರಿಂದ ಮೂರು ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಈ ವಿಚಾರದಲ್ಲಿಯೂ ಎಡವಟ್ಟು ಮಾಡಿಕೊಂಡ ಸರ್ಕಾರದಿಂದ ಕೊರೊನಾ ಸ್ಯಾಂಪಲ್ ಟೆಸ್ಟಿಂಗ್ ಇಳಿಕೆ ಆಗಿದೆ. ರೋಗ ಲಕ್ಷಣ ಇಲ್ಲದ ಸೋಂಕಿತರನ್ನು 5 ರಿಂದ 7ನೇ ದಿನಕ್ಕೆ ಡಿಸ್ಚಾರ್ಜ್ ಮಾಡಲಾಗ್ತಿದೆ. ಸೋಂಕಿತರ ಮೇಲೆ ನಿಗಾ ವಹಿಸುವ ಅವಧಿಯನ್ನು 12 ರಿಂದ 10 ದಿನಗಳಿಗೆ ಇಳಿಸಲಾಗಿದೆ.

8. ರ‍್ಯಾಂಡಮ್‌ ಟೆಸ್ಟ್ ಸ್ಥಗಿತ: ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸಮುದಾಯಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಇದ್ದಕ್ಕಿದ್ದಂತೆ ಕುಂಟು ನೆಪ ಹೇಳಿ ಪರೀಕ್ಷೆಯನ್ನು ನಿಲ್ಲಿಸಲಾಗಿದೆ. ಕಂಟೈನ್‍ಮೆಂಟ್ ವಲಯಗಳಲ್ಲಿ ರ‍್ಯಾಂಡಮ್‌ ಟೆಸ್ಟ್ ನಡೆಸಿದ್ರೆ ಮತ್ತಷ್ಟು ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳಿವೆ.

9. ಅಂತರ ಜಿಲ್ಲೆ ಸಂಚಾರ: ಲಾಕ್‍ಡೌನ್ ರಿಲೀಫ್ ಬೆನ್ನಲ್ಲೇ ಅಂತರ ಜಿಲ್ಲಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದೀಗ ಅಂತರ ಜಿಲ್ಲೆ ಪ್ರಯಾಣದ ಹಿನ್ನೆಲೆ ಹೊಂದಿದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಬಿಎಂಟಿಸಿ ಸಿಬ್ಬಂದಿ ಸಹ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.

10. ಅಂತರಾಜ್ಯ ಬಸ್ ಓಡಾಟ: ಕೊರೊನಾ ಸ್ಫೋಟವಾಗುತ್ತಿರುವ ಈ ಸಂದರ್ಭದಲ್ಲಿ ಅಂತರಾಜ್ಯ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದೆ. ನೆರೆಯ ಆಂಧ್ರದಲ್ಲೂ ಕೊರೋನಾ ಸೋಂಕು ಹೆಚ್ಚಿದೆ. ಆಂಧ್ರ ಪ್ರದೇಶ ಪ್ರಯಾಣದ ಹಿನ್ನೆಲೆ ಹೊಂದಿರುವ 34 ಜನರು ಕರ್ನಾಟಕದಲ್ಲಿದ್ದಾರೆ. ಇದರಿಂದ ರಾಜ್ಯದಲ್ಲಿ ಸೋಂಕು ಮತ್ತಷ್ಟು ಸ್ಫೋಟಗೊಳ್ಳಬಹುದು

Comments

Leave a Reply

Your email address will not be published. Required fields are marked *