ಸರ್ಕಾರದ ಥಿಯೇಟರ್ ಮಿತಿ ನೀತಿಗೆ ಪವರ್ ಸ್ಟಾರ್ ಆಕ್ಷೇಪ

ಬೆಂಗಳೂರು: ಚಿತ್ರ ಮಂದಿರಗಳ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದ್ದು, ದಯವಿಟ್ಟು ಶೇ.100ಕ್ಕೆ ಅವಕಾಶ ಮಾಡಿಕೊಡಿ. ಚುನಾವಣಾ ರ‍್ಯಾಲಿ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ ಆದರೆ ಸಿನಿಮಾ ರಂಗವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ದಯವಿಟ್ಟು ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ನಟ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೇಳಿಕೊಂಡಿದ್ದಾರೆ.

ಫೇಸ್ಬುಕ್ ಲೈವ್‍ನಲ್ಲಿ ಮಾತನಾಡಿರುವ ಅವರು, ಹೆಚ್ಚು ಜನ ಕುಟುಂಬ ಸಮೇತರಾಗಿ ಚಿತ್ರ ಮಂದಿಗಳಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು. ಶೇ.100 ಭರ್ತಿಗೆ ಅವಕಾಶ ನೀಡಬೇಕು. ಇದರಿಂದ ನಮಗೆ ತುಂಬಾ ಕಷ್ಟವಾಗುತ್ತದೆ ಎಂದು ಅಪ್ಪು ಮನವಿ ಮಾಡಿದ್ದಾರೆ.

ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಅರ್ಹರೆಲ್ಲರೂ ಕೊರೊನಾ ವ್ಯಾಕ್ಸಿನ್ ಪಡೆಯಿರಿ ಈ ಮೂಲಕ ಸುರಕ್ಷಿತವಾಗಿರಿ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಪೈರಸಿಯನ್ನು ದೂರವಿಡಿ, ನೀವೇ ಪವರ್ ಆಫ್ ಯೂತ್ ಎಂದು ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಯುವರತ್ನನಿಗೆ ಅಭಿಮಾನಿಯ ವಿಶೇಷ ಸ್ವಾಗತ

ತುಂಬಾ ಪ್ರೀತಿಯಿಂದ ಯುವರತ್ನ ಚಿತ್ರವನ್ನು ಒಪ್ಪಿಕೊಂಡಿದ್ದೀರಿ, ಯಶಸ್ವಿಗೊಳಿಸಿದ್ದೀರಿ. ಹಬ್ಬದ ರೀತಿಯಲ್ಲಿ ಸಿನಿಮಾವನ್ನು ಸ್ವೀಕರಿಸಿ, ಸಂಭ್ರಮಿಸಿದ ರೀತಿ, ಪ್ರೀತಿ, ವಿಶ್ವಾಸಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ ಎಂದು ಅಪ್ಪು ಭಾವುಕರಾಗಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಹೆಚ್ಚು ಜನ ಆಗಮಿಸಿ ಸಿನಿಮಾ ನೋಡುತ್ತಿದ್ದಾರೆ. ಸುರಕ್ಷಿತವಾಗಿ, ಚಿತ್ರ ಮಂದಿರಗಳಲ್ಲಿ ಸಹ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಕ್ಕಾಗಿಯೇ ಎಲ್ಲರೂ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಕೇವಲ ಒಂದು ದಿನ ಕಳೆದಿದೆ. ಇದೀಗ ಇದ್ದಕ್ಕಿಂತೆ ಈ ನಿರ್ಧಾರ ಕೈಗೊಳ್ಳುವುದರಿಂದ ತುಂಬಾ ನಷ್ಟವಾಗುತ್ತದೆ. ಸಾಮಾಜಿಕ ಕಾಳಜಿ ಇರುವ, ಉತ್ತಮ ಸಂದೇಶ ಹೊಂದಿರುವ ಸಿನಿಮಾ ಇದಾಗಿದೆ ಎಂದು ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್ ಆನಂದರಾಮ್ ಲೈವ್‍ನಲ್ಲಿ ಹೇಳಿದ್ದಾರೆ.

ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ನಿರ್ಧಾರ ಕೈಗೊಂಡಿದ್ದಕ್ಕೆ ಆಘಾತವಾಗಿದೆ, ತುಂಬಾ ಕಷ್ಟದ ಪರಿಸ್ಥಿತಿ ಇದು. ಸಾರ್ವಜನಿಕರು ಇಷ್ಟಪಟ್ಟು ಸಿನಿಮಾ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಈ ರೀತಿ ನಿರ್ಧಾರ ಕೈಗೊಳ್ಳಬಾರದು, ಪ್ರೇಕ್ಷಕರ ಬೆಂಬಲದ ಜೊತೆಗೆ ಸರ್ಕಾರದ ಬೆಂಬಲವೂ ಅಗತ್ಯವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಬಂದು ನೋಡಿದಾಗಲೇ ಸಿನಿಮಾ ಯಶಸ್ವಿಯಾಗಲು ಸಾಧ್ಯ. ದಯವಿಟ್ಟು ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ಸಂತೋಷ್ ಕೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *