– ನಮ್ಮದೇ ಸರ್ಕಾರವಿದ್ದರೂ ಅನುದಾನ ಸಿಗುತ್ತಿಲ್ಲ
– ವಿರೋಧ ಪಕ್ಷಗಳಿಗೆ ಭರ್ಜರಿ ಅನುದಾನ
– ಸಂಸದರು, ಶಾಸಕರಿಂದ ಕಟೀಲ್‌ಗೆ ದೂರು
– ಹೈಕಮಾಂಡ್ ಗಮನಕ್ಕೆ ತರುವಂತೆ ಒತ್ತಡ
ಬೆಂಗಳೂರು: ಕರ್ನಾಟಕದ ಹೊಂದಾಣಿಕೆ ರಾಜಕೀಯದ ಬಗ್ಗೆ ದೆಹಲಿಯಲ್ಲಿ ಮಂಗಳವಾರ ಮಹತ್ವದ ದಿಢೀರ್ ಸಭೆ ನಡೆದಿದೆ.
ಹೌದು. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಅಶ್ವಥ್ ನಾರಾಯಣ್, ಮಹೇಶ್ ಟೆಂಗಿನಕಾಯಿ, ಸಿದ್ದರಾಜು ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕರು, ಸಂಸದರು ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ನೀಡಿದ ದೂರಿನ ಬಗ್ಗೆ ಕಟೀಲ್ ಪ್ರಸ್ತಾಪ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಸಭೆ ನಡೆದಿದ್ದು ಯಾಕೆ?
ನಮ್ಮದೇ ಸರ್ಕಾರ ಇದ್ದರೂ ನಮ್ಮ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಹಲವು ಕಡೆಗಳಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಬೇಡ ಎಂದು ಸಿಎಂ, ಸಚಿವರಿಗೆ ಸೂಚಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಿಜೆಪಿಯ ಕೆಲ ಸಂಸದರು, ಶಾಸಕರು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ.

ಶಾಸಕರ ಆರೋಪ ಏನು?
ಸರ್ಕಾರ ನಮ್ಮದೇ ಇದ್ದರೂ ವಿರೋಧ ಪಕ್ಷಗಳ ಕೆಲಸ ನಡೆಯುತ್ತಿದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕ್ಷೇತ್ರಕ್ಕೆ ನಮ್ಮದೇ ಸರ್ಕಾರದಿಂದ ಅತೀ ಹೆಚ್ಚು ಅನುದಾನ ಸಿಕ್ಕಿದೆ. ಆದರೆ ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು ಕೋವಿಡ್ 19 ಆರ್ಥಿಕ ಕಾರಣ ಹೇಳಿ ಹಿಂದೇಟು ಹಾಕಲಾಗುತ್ತಿದೆ. ಆದರೆ ವಿಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಭರಪೂರ ಅನುದಾನ ಸಿಗುತ್ತಿದೆ. ಹಲವು ಕಡೆಗಳಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲಾಗುತ್ತಿದೆ. ಹೊದಾಣಿಕೆ ರಾಜಕಾರಣ ಬೇಡ ಎಂದು ಸಿಎಂ, ಸಚಿವರಿಗೆ ಸೂಚಿಸಬೇಕು.

ಬಿಜೆಪಿ ಶಾಸಕರ ಚಾರ್ಜ್‌ಶೀಟ್ ಏನು?
ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಡಿಸಿಎಂ, ಸಚಿವರು ಆ ಕ್ಷೇತ್ರಕ್ಕೆ ಹೋಗಿ ಕೆಲಸಗಳಿಗೆ ಚಾಲನೆ ಕೊಡುತ್ತಿದ್ದಾರೆ. ಎಷ್ಟು ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಹೀಗೆ ಕೆಲಸಗಳು ನಡೆಯುತ್ತಿದೆ? ಸಚಿವ ಶ್ರೀರಾಮುಲು ಹೆಚ್‌ಡಿಕೆ ಜೊತೆ ಹೋಗಿ ಆಗಿರುವ ಕೆಲಸಗಳನ್ನು ಉದ್ಘಾಟನೆ ಮಾಡುತ್ತಾರೆ. ಸಚಿವ ಯೋಗೇಶ್ವರ್ ಇದ್ದರೂ ಕ್ಯಾರೇ ಅಂದಿಲ್ಲ. ಹೀಗೆ ಮಾಡಿದರೆ ಬಿಜೆಪಿ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ನಮ್ಮ ಕ್ಷೇತ್ರಗಳಲ್ಲಿ ಕೆಲಸಗಳೇ ಮಂಜೂರಾತಿ ಆಗುತ್ತಿಲ್ಲ. ಸಣ್ಣಪುಟ್ಟ ಕೆಲಸಗಳಿಗೆ ಮಂಜೂರಾಗಿದ್ದರೂ ಆ ಕ್ಷೇತ್ರಗಳಿಗೆ ಬನ್ನಿ ಎಂದು ಕರೆದರೂ ಬರುತ್ತಿಲ್ಲ. ಸರ್ಕಾರ ನಮ್ಮದು, ಆದ್ರೆ ಅವರದ್ದೇ ಸರ್ಕಾರ ಎನ್ನುವಂತಿದೆ. ಈಗ ಏನು ಮಾಡಬೇಕು ಹೇಳಿ. ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡಬಾರದು ಸರಿ. ಈಗ ಆಂತರಿಕವಾಗಿಯಾದರೂ ಸರಿ ಮಾಡಿ. ಈ ವಿಚಾರವನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತನ್ನಿ ಎಂದು ಶಾಸಕರು ಬಿಎಸ್‌ವೈ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.

Leave a Reply