ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ಶಾಸಕ ಡಾ.ಚಿತ್ತರಂಜನ್ ಕಲಕೋಟಿ ವಿಧಿವಶ

– ಉಚಿತ ಚಿಕಿತ್ಸೆ ಮೂಲಕ ಜನಪ್ರಿಯ ವೈದ್ಯರಾಗಿದ್ದ ಕಲಕೋಟಿ

ಹಾವೇರಿ: ಹಾವೇರಿ ತಾಲೂಕಿನ ಮಾಜಿ ಶಾಸಕರಾಗಿದ್ದ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಡಾ.ಚಿತ್ತರಂಜನ್ ಕಲಕೋಟಿ(90) ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ.

ಮಾಜಿ ಶಾಸಕ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಡಾ.ಚಿತ್ತರಂಜನ್ ಕಲಕೋಟಿ ಅವರು 1983 ಹಾಗೂ 1985 ರಲ್ಲಿ ಎರಡುಬಾರಿ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಸೇರಿದಂತೆ ಜನತಾ ಪರಿವಾರದವರಿಗೆ ಆಪ್ತರಾಗಿದ್ದರು. ರಾಜಕೀಯದಲ್ಲಿ ಜನಪ್ರಿಯರಾಗುವುದಕ್ಕಿಂತ ಹೆಚ್ಚಾಗಿ ಡಾ.ಕಲಕೋಟಿಯವರು ವೈದ್ಯರಾಗಿ ಗ್ರಾಮೀಣಭಾಗದಲ್ಲಿ ಉಚಿತ ಸೇವೆ ನೀಡಿ, ಪ್ರಸಿದ್ಧಿ ಪಡೆದಿದ್ದರು.

ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಡಾ.ಚಿತ್ತರಂಜನ್ ಅವರು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸ್ವಭಾವದರಾಗಿದ್ದರು. ಹುತಾತ್ಮ ಮೈಲಾರ ಮಹದೇಪ್ಪನವರ ಹೋರಾಟದ ಕೇಂದ್ರವಾಗಿದ್ದ ಕೊರಡೂರು ಗ್ರಾಮದ ಮಹಾತ್ಮಾ ಗಾಂಧಿ ಗ್ರಾಮ ಸೇವಾಶ್ರಮದಲ್ಲಿಯೇ ವೈದ್ಯಕೀಯ ಸೇವೆ ನೀಡಿದ್ದರು. ಮಾಜಿ ಶಾಸಕ ಚಿತ್ತರಂಜನ ಕಲಕೋಟಿ ಅವರ ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಹಾವೇರಿ ತಾಲೂಕು ಕೊರಡೂರು ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಆಪ್ತ ವಲಯ ತಿಳಿಸಿದೆ.

Comments

Leave a Reply

Your email address will not be published. Required fields are marked *