ಸರಗಳ್ಳರನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ತುಮಕೂರು: ಕೈಯಲ್ಲಿ ಚಾಕುಗಳನ್ನು ಹಿಡಿದುಕೊಂಡು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಸರ ದೋಚುತ್ತಿದ್ದ ಮೂವರನ್ನು ತುಮಕೂರು ತಾಲೂಕಿನ ಬ್ಯಾತ ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವರು ಕಿಡಿಗೇಡಿಗಳ ತಂಡ ಸೋಮವಾರ ಮಧ್ಯಾಹ್ನ ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ಮೊಬೈಲ್ ಟ್ಯಾಂಪರ್ ಗ್ಲಾಸ್ ಹಾಕುವ ಕಾರಿನ ಬಳಿ ಬಂದು ಮೊಬೈಲ್ ಗಳನ್ನು ಕಿತ್ತುಕೊಳ್ಳುವ ಯತ್ನ ಮಾಡಿದ್ದಾರೆ. ಮೊಬೈಲ್ ಕೊಡದೇ ಇದ್ದ ಕಾರಣಕ್ಕೆ ಮನಸ್ಸೋ ಇಚ್ಛೆ ಇರಿದು ಅಲ್ಲಿಂದ ಪರಾರಿಯಾಗಿದ್ದರು. ನಂತರ ಸೋಮೇಶ್ವರ ಬಡಾವಣೆಯಲ್ಲಿ ಕಾರಿನಲ್ಲಿ ಕುಳಿತಿದ್ದ ಶಮಂತ್ ಎಂಬಾತನ ಬಳಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿ ಆತನಿಗೂ ಇರಿದು ಅಲ್ಲಿಂದ ಪರಾರಿಯಾಗಿದ್ದರು.

ಅಲ್ಲಿಂದ ಗ್ರಾಮಾಂತರ ಭಾಗಕ್ಕೆ ಪರಾರಿಯಾಗಿದ್ದ ಈ ಮೂವರನ್ನು ಊರ್ಡಿಗೆರೆ ಸಮೀಪ ಬ್ಯಾತ ಗ್ರಾಮದ ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ಇರಿತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಕು, ಮೊಬೈಲ್ ಹಾಗೂ ಸರವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *