ಸಮನ್ವಯತೆ ಕೊರತೆ – ಬಿಎಸ್‍ವೈಯನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಿಎಲ್‍ಎ ಸ್

ಬೆಂಗಳೂರು: ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯತೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಮಾತುಕತೆಯ ವೇಳೆ ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ. ಕೆಲ ಸಂವಹನ, ಸಮನ್ವಯತೆ ಕೊರತೆಯಿಂದ ಸಮಸ್ಯೆ ಆಗಿರುವುದು ನಿಜ ಎಂದು ಹೇಳಿರುವುದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

ಮುಂದೆ ಸಮನ್ವಯತೆ ಕೊರತೆ ಆಗದಂತೆ ಕೇಂದ್ರವೂ ಕ್ರಮ ವಹಿಸಲಿದೆ. ರಾಜ್ಯ ಸರ್ಕಾರದಿಂದಲೂ ಅಗತ್ಯ ಕ್ರಮ ವಹಿಸಬೇಕು. ಬೇರೆ ರಾಜಕೀಯ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸದ್ಯಕ್ಕೆ ತಲೆಕೆಡಿಸಿಕೊಂಡಿಲ್ಲ ಎಂದು ಸಿಎಂ ಯಡಿಯೂರಪ್ಪನವರಿಗೆ ಸಂತೋಷ್ ಅವರು ಸಮಾಧಾನ ಮಾಡಿದ್ದಾರೆ.

ಸಹಜವಾಗಿ ಕೋವಿಡ್‍ನಂತಹದ ದೊಡ್ಡ ಸಮಸ್ಯೆ ಬಂದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಇನ್ನು ಮುಂದೆ ಆ ರೀತಿ ಸಮಸ್ಯೆಗಳು ಬರುವುದಿಲ್ಲ ಎಂದು ಸಂತೋಷ್ ಅವರು ಹೇಳಿದ್ದಾರೆ. ಒಟ್ಟು 15 ನಿಮಿಷಗಳ ಕಾಲ ಸಿಎಂ ಸಂತೋಷ್ ಮಾತುಕತೆ ನಡೆದಿದೆ.

ಯಾಕೆ ಈ ಮಾತುಕತೆ?
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‍ಗೆ ಸರ್ಕಾರ ಅಫಿಡವಿತ್ ಸಲ್ಲಿಸಿತ್ತು. ವಿಚಾರಣೆಯ ಬಳಿಕ ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು.

ರಾಜ್ಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶಕ್ಕೆ ನಾವು ತಡೆ ನೀಡುವುದಿಲ್ಲ. ಒಂದು ವೇಳೆ ತಡೆ ನೀಡಿದರೆ ಕರ್ನಾಟಕದ ಜನರು ಆಕ್ಸಿಜನ್ ಇಲ್ಲದೇ ತತ್ತರಿಸಿ ಹೋಗಲಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಆಕ್ಸಿಜನ್ ಕೋಟಾವನ್ನು ನಾಲ್ಕು ದಿನಗಳಲ್ಲಿ ಹೆಚ್ಚಿಸಬೇಕು ಎಂದು ಮೇ 7 ರಂದು ಕೇಂದ್ರಕ್ಕೆ ಆದೇಶಿಸಿತ್ತು.

ಎರಡು ಕಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಯಾಕೆ ಈ ಹೊಂದಾಣಿಕೆ ಸಮಸ್ಯೆ ಎಂಬ ಪ್ರಶ್ನೆ ಎದ್ದಿತ್ತು. ಅಷ್ಟೇ ಅಲ್ಲದೇ ಎರಡು ಸರ್ಕಾರಕ್ಕೆ ಇರಿಸು ಮುರಿಸು ಆಗಿತ್ತು.

Comments

Leave a Reply

Your email address will not be published. Required fields are marked *