ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿದ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಆರೋಪಿಗಳಾದ ಸಾಗರ್ ತಾಪ, ಶ್ರೀಧರ್ ಮತ್ತು ನವೀನ್ ಎಂಬ ಮೂವರನ್ನು ಬಂಧಿಸಿದ್ದ ಪೊಲೀಸರು, ಶನಿವಾರ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನ ನೀಡಿ ಆದೇಶಿಸಿತ್ತು. ತನಿಖೆ ಮುಂದುವೆಸಿದ ಪೊಲೀಸರು ಘಟನೆ ಸಂಬಂಧ ಶಾಸಕ ಸತೀಶ್ ರೆಡ್ಡಿ ಹೇಳಿಕೆ ಪಡೆದುಕೊಂಡಿದ್ದರು. ಈ ವೇಳೆ ಶಾಸಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಸದ್ಯ ಆರೋಪಿಗಳು ಹೇಳಿರುವ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ನನ್ನ ಮನೆಯ ಬಳಿಯಿದ್ದ ಕಾರುಗಳಿಗೆ ಬೆಂಕಿ ಹಾಕಿದ್ದರ ಹಿಂದೆ ಕೆಲ ಕಾಣದ ಕೈಗಳ ಕೈವಾಡ ಇದೆ. ನನ್ನ ಭೇಟಿಗೆ ಅವಕಾಶ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಬೆಂಕಿ ಹಾಕಲಾಗಿದೆ ಅನ್ನೋ ಹೇಳಿಕೆ ಸುಳ್ಳು. ಪೊಲೀಸರು ಸರಿಯಾದ ತನಿಖೆ ನಡೆಸಬೇಕು. ಆಗ ಆಸಲಿ ಕಾರಣ ತಿಳಿಯಲಿದೆ ಅಂತಾ ಪೊಲೀಸರ ಮುಂದೆ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳನ್ನು ಮತ್ತೆ ಬಾಡಿ ವಾರೆಂಟ್ ಮೇಲೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿ ಪಕ್ಕದ ರಸ್ತೆಯಲ್ಲೇ ಕಿಡಿಗೇಡಿಗಳ ಓಡಾಟ!

ಶಾಸಕರ ಭೇಟಿಗೆ ಅವಕಾಶ ಕೊಟ್ಟಿಲ್ಲ, ಕೆಲಸವಿಲ್ಲದೇ ಬಡತನದ ಕಾರಣಕ್ಕೆ ಬೇಸತ್ತು ಕೃತ್ಯವೆಸಗಿದ್ದಾರಾ? ಅಥವಾ ಬೇರೆ ಏನಾದರೂ ಕಾರಣ ಇದೆಯಾ? ಆರೋಪಿಗಳ ಬೆನ್ನಿಗೆ ಯಾರಾದರೂ ಇದ್ದಾರಾ ಅನ್ನೋ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *